ಕರ್ನಾಟಕ

ಬಿಸಿಲಿನ ಬೇಗೆ: ಕೋರ್ಟ್‌ ಆವರಣದಲ್ಲೇ ವಕೀಲ ಸಾವು

Pinterest LinkedIn Tumblr

Untitled-1ಕಲಬುರಗಿ: ಬಿಸಿಲಿನ ಬೇಗೆಯಿಂದಾಗಿ ವಕೀಲರೊಬ್ಬರು ಕೋರ್ಟ್‌ ಆವರಣದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ
ನಡೆದಿದೆ. ಕಾಳಗಿ ಸಮೀಪದ ಭರತನೂರು ನಿವಾಸಿ, ಕಿರಿಯ ವಕೀಲ ರೇವಣಸಿದ್ದಪ್ಪ ಮಂಗಲಗಿ (40) ಎಂಬುವವರು ಜಿಲ್ಲಾ ನ್ಯಾಯಾಲಯದ
ಆವರಣದಲ್ಲಿ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಬಿಸಿಲಿನ ಬೇಗೆಯಿಂದಾಗಿ ಕರ್ತವ್ಯನಿರತ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ಸಾವನ್ನಪ್ಪಿದ್ದರು. ದಿನೇ ದಿನೇ ಹೆಚ್ಚುತ್ತಿರುವ ಬಿಲಿಸಿನ
ತಾಪಕ್ಕೆ ಜಿಲ್ಲೆಯಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದೆ. ಮಂಗಳವಾರ ನಗರದಲ್ಲಿ 44.5 ಡಿಗ್ರಿ ತಾಪವಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ರೇವಣಸಿದ್ದಪ್ಪ
ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಇದು ಬಿಸಿಲಿನ ಬೇಗೆಯಿಂದ ಸಂಭವಿಸಿರುವ ಸಾವು ಎನ್ನುವುದು ಕಂಡುಬರುತ್ತದೆ ಎಂದು ಸರ್ಕಾರಿ ವೈದ್ಯರು ಹೇಳಿದ್ದಾರೆ.

ಮಂಗಳವಾರ ನ್ಯಾಯವಾದಿಗಳ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ವಕೀಲ ರೇವಣಸಿದ್ದಪ್ಪ ಮಂಗಲಗಿ ಮತದಾನ ಮಾಡಲು ಜಿಲ್ಲಾ ನ್ಯಾಯಾಲಯ ಆವರಣಕ್ಕೆ ಆಗಮಿಸಿದ್ದರು. ಸರತಿಯಲ್ಲಿ ನಿಂತು ಮತದಾನ ಮಾಡಿದ್ದ ಅವರು, ಬಿಸಿಲಿನ ತಾಪದಿಂದಾಗಿ ಸುಸ್ತಾಗಿದ್ದರಿಂದ ಅವರು ಬಾರ್‌ ಕೌನ್ಸಿಲ್‌ ಹಳೇ ಕಟ್ಟಡದ ಕೊಠಡಿಯೊಂದರಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ತೆರೆಳಿದ್ದರು. ಸಂಜೆ ಹೊತ್ತಿನವರೆಗೂ ಅವರು ಅಲ್ಲೇ ಇರುವುದನ್ನು ಗಮನಿಸಿದ
ಕೆಲ ವಕೀಲರು ಅವರನ್ನು ಎಬ್ಬಿಸಲು ಹೋದಾಗ ಮಂಗಲಗಿ ಅವರು ಸಾವನ್ನಪ್ಪಿರುವ ಸಂಗತಿ ತಿಳಿದುಬಂದಿದೆ.
-ಉದಯವಾಣಿ

Write A Comment