ಕರ್ನಾಟಕ

ಕೂಲಿಗೆ ಕೂಗು : ಬರದ ನಾಡಿನಲ್ಲಿ ಮುಖ್ಯಮಂತ್ರಿಗೆ ಸಂತ್ರಸ್ತರ ಮೊರೆ

Pinterest LinkedIn Tumblr

kooliಲಕ್ಷ್ಮೇಶ್ವರ (ಗದಗ), ಏ. ೨೭- ಬರಗಾಲದಲ್ಲಿ ದುಡಿಯುವ ಜನರಿಗೆ ಕೈ ತುಂಬಾ ಕೆಲಸವೇನೋ ಉಂಟು; ಆದರೆ ಕೂಲಿ ಹಣ ಮಾತ್ರ ಸೊನ್ನೆ.
ಬರ ಸಮೀಕ್ಷಾ ಪ್ರವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೂಲಿ ಕಾರ್ಮಿಕರು ಮಾಡಿಕೊಂಡ ಕಳಕಳಿಯ ಮನವಿಯನ್ನು ಕಂಡಾಗ ಸ್ಥಳೀಯ ಅಧಿಕಾರಿಗಳು ಹಾಗೂ ದಳ್ಳಾಳಿಗಳ ನಡುವಣ ಚಕ್ಕಂದ ಏನೆಂಬುದು ಬಯಲು.
`ಸ್ವಾಮಿ, ಅಧಿಕಾರಿಗಳು ಹೇಳಿದಂತೆ ಕೆರೆಯ ಹೂಳನ್ನು ಬಹುವಾಗಿ ಸಾಗಿಸುತ್ತಿದ್ದೇವೆ. ದಿನನಿತ್ಯ ಇದೇ ಕೆಲಸ. ಉರಿಬಿಸಿಲಲ್ಲೂ ಇದೇ ಕಾಯಕ. ಆದರೆ ಶ್ರಮಕ್ಕೆ ಸರಿಯಾಗಿ ಇದುವರೆಗೆ ಕೂಲಿ ಕೊಟ್ಟಿಲ್ಲ. ಹೀಗಿದ್ದರೆ, ನಮ್ಮ ಹೊಟ್ಟೆ ಪಾಡೇನು ಮಹಾಸ್ವಾಮಿ’ ಎಂದು ಸಂತ್ರಸ್ತರ ಮೊರೆ ನೋಡಿದ ಮುಖ್ಯಮಂತ್ರಿಗಳ ಹದ್ದಿನ ಕಣ್ಣು ಅಧಿಕಾರಿಗಳ ಕಡೆ ತಿರುಗಿತು.
ಅಧಿಕಾರಿಗಳ ಕಡೆ ತಿರುಗಿದ ಸಿದ್ದರಾಮಯ್ಯ ಅವರನ್ನು ಎಡ‌ಬಿಡದೆ ಕಾಡಿದ ಸಂತ್ರಸ್ತರು `ಮಳೆ ಬೆಳೆ ಇಲ್ಲದೆ ಜನರೆಲ್ಲಾ ಕಂಗಾಲು, ಪೂರೈಕೆಯಾಗುವುದು ಗಲೀಜು ನೀರು, ಜಾನುವಾರಿಗೆ ಮೇವಿಲ್ಲ, ನಮಗೆ ಊಟಕ್ಕೂ ಸೊನ್ನೆ. ಹೇಗಾದರೂ ಮಾಡಿ ನಮ್ಮನ್ನು ಸಂಕಟದಿಂದ ಪಾರು ಮಾಡಿ’ ಎಂದು ಪರಿಪರಿಯಾಗಿ ವಿನಂತಿಸಿಕೊಂಡಾಗ ಉರಿಬಿಸಿಲಿನ ನಡುವೆ ಜನ ಜಮಾಯಿಸಿದ್ದರೂ ಗವ್ ಎನ್ನುವ ಮೌನ. ಒಟ್ಟಾರೆ ಮೂಕರೋಧನದ ಸ್ಥಿತಿ.
ಗೋಳಿನ ಮಹಾಪೂರ
ನೀರು, ದು‌ಡಿದ ಕೂಲಿ….. ಜಾನುವಾರುಗಳಿಗೆ ಮೇವು… ಹೀಗೆ ಹತ್ತು ಹಲವು ಬೇಡಿಕೆಗಳ ಮಹಾಪೂರವೇ ಬರದಿಂದ ಕಂಗೆಟ್ಟ ಜಿಲ್ಲೆಯ ಜನತೆಯಿಂದ ಸಿಎಂ.ಸಿದ್ಧರಾಮಯ್ಯನವರಿಗೆ ಮನವಿಗಳು ಇಂದು ಹರಿದು ಬಂದವು.
2ನೇ ಹಂತದ ಬರ ಸಮೀಕ್ಷೆಯಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಬೆಳಿಗ್ಗೆ ಶಿರಹಟ್ಟಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಗಡಿಕೆರೆಯ ಹೂಳೆತ್ತುವ ಕಾಮಗಾರಿ ವೀಕ್ಷಣೆಗೆಂದು ತೆರಳಿದರು.
ಕೆರೆಯ ದಂಡೆಯ ಮೇಲಿನ ಮರದ ನೆರಳಲ್ಲಿ ನಿಂತು ಕಾಮಗಾರಿ ವೀಕ್ಷಿಸುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕೆಳಗೆ ಇಳಿದು ಬಂದು ಕಾಮಗಾರಿ ವೀಕ್ಷಣೆ ಮಾಡಿ ಎಂದು ಕಾರ್ಮಿಕರು ಘೋಷಣೆಗಳನ್ನು ಕೂಗಿದರು. ಇದರಿಂದ ಸಿಎಂ. ಕೆರೆಗೆ ಇಳಿಯಬೇಕಾಯಿತು. ಅಪಾರ ಪ್ರಮಾಣದಲ್ಲಿ ಸೇರಿದ್ದ ಜನತೆ ಹಾಗೂ ಕಾರ್ಮಿಕರು ದುಡಿದ ಕೂಲಿ ಸರಿಯಾಗಿ ನೀಡುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಾರ್ಮಿಕರ ಕೂಲಿ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದರು.
ಕೇವಲ 10 ನಿಮಿಷ ಕೆರೆಯ ಕಾಮಗಾರಿ ವೀಕ್ಷಿಸಿದ ಮುಖ್ಯಮಂತ್ರಿ ತಮ್ಮ ಪ್ರಯಾಣ ಮುಂದುವರೆಸಿದರು. ಇದರಿಂದ ಮಾಗಡಿ ಗ್ರಾಮದ ರೈತರು ಕೇವಲ ಕೆರೆಗೆ ಮಾತ್ರ ಭೆಟ್ಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ನೀರಿಲ್ಲದೆ ನಾವು ಪರದಾಡುತ್ತಿದ್ದೇವೆ. ಊರಿಗೆ ಸಿಎಂ ಬರದೇ ಹೋದದ್ದು ಸರಿಯಲ್ಲ ಎಂಬ ಅಸಮಾಧಾನ ತೋಡಿಕೊಂಡರು.
ಗ್ರಾಮಸ್ಥರು ಮೊದಲು ನೀರು ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ನಂತರ ಲಕ್ಕುಂಡಿ, ಹರ್ಲಾಪುರ ಗ್ರಾಮಗಳಿಗೆ ತೆರಳಿದ ಮುಖ್ಯಮಂತ್ರಿಗಳಿಗೆ ಎರಡೂ ಗ್ರಾಮಗಳಲ್ಲೂ ಕೂಲಿ ಕಾರ್ಮಿಕರು ತಮಗೆ ವೇತನ ಪಾವತಿಯಾಗದ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿಕೊಂಡರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಮನಿ, ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಜಿಲ್ಲಾಧಿಕಾರಿ ಎ.ಎಸ್. ಪ್ರಸನ್ನಕುಮಾರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment