ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ ಬಿಡುಗಡೆ ಮಾಡಿರುವ ನೀರು ಮಂಗಳವಾರ ಮಧ್ಯಾಹ್ನ ತಾಲ್ಲೂಕಿನ ಕಲ್ಲೋಳ ತಲುಪಿದ್ದು, ರಾತ್ರಿ ವೇಳೆಗೆ ತಾಲ್ಲೂಕಿನ ಗಡಿ ದಾಟಿ ರಾಯಬಾಗ ತಾಲ್ಲೂಕು ಪ್ರವೇಶಿಸಲಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲ್ಲೂಕು ಸೇರಿ ವಿಜಯಪುರ ಮತ್ತು ಬಾಗಲಕೋಟೆ ತಾಲ್ಲೂಕುಗಳ ಕೃಷ್ಣಾ ನದಿಪಾತ್ರದ ಗ್ರಾಮಗಳ ಜನ–ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಿಯೋಗ ಹಲವು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರು, ಅಧಿಕಾರಿಗಳನ್ನು ಭೇಟಿಯಾಗಿ ಕೊಯ್ನಾ, ವಾರಣಾ ಜಲಾಶಯಗಳ ಮೂಲಕ ರಾಜ್ಯಕ್ಕೆ 4 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕೋರಿತ್ತು. ರಾಜ್ಯದ ನಿಯೋಗದ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರ ರಾಜ್ಯಕ್ಕೆ 1 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದೆ.
ರಾಜಾಪುರ ಬ್ಯಾರೇಜ್ನಿಂದ ಸೋಮವಾರದಿಂದ ದಿನವೊಂದಕ್ಕೆ 2000 ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದ್ದು, ಅಥಣಿ ತಾಲ್ಲೂಕಿನ ಜುಗೂಳ, ಮಂಗಾವತಿ ಗ್ರಾಮಗಳನ್ನು ದಾಟಿ ಚಂದೂರ ಟೆಕ್ ಮೂಲಕ ಮಂಗಳವಾರ ಮಧ್ಯಾಹ್ನ ನೀರು ಕಲ್ಲೋಳ ಬಳಿ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಕಳೆದೊಂದು ತಿಂಗಳಿನಿಂದ ನದಿ ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ನದಿತೀರದ ಕೃಷಿಕರು ಇದರಿಂದ ಸಂತಸಗೊಂಡಿದ್ದಾರೆ.
‘ಸರ್ಕಾರ ರಾಜ್ಯದ ಜನತೆಗೆ ಕುಡಿಯುವ ನೀರಿನ ಸಲುವಾಗಿ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಿರುವುದು ಸ್ವಾಗತಾರ್ಹ. ಕುಡಿಯುವ ನೀರು ಪೂರೈಕೆ ಜೊತೆಗೆ ಮೂರ್ನಾಲ್ಕು ದಿನಗಳಾದರೂ ದಿನವೊಂದಕ್ಕೆ ಕನಿಷ್ಠ 3 ಗಂಟೆ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿದರೆ ಒಣಗುತ್ತಿರುವ ಬೆಳೆಗಳಿಗೂ ಮರುಜೀವ ನೀಡಿದಂತಾಗುತ್ತದೆ.
ರೈತರೂ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ’ ಎಂಬುದು ಹೆಸರು ಹೇಳಲಿಚ್ಛಿಸದ ನಸಲಾಪುರ ಗ್ರಾಮದ ರೈತರೊಬ್ಬರ ಆಗ್ರಹ. ‘ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬಿಡುಗಡೆ ಮಾಡಿರುವ ನೀರನ್ನು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಾತ್ರ ಬಳಕೆಯಾಗುವಂತೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ನೀರಾವರಿ ಮತ್ತಿತರ ಉದ್ದೇಶಗಳಿಗಾಗಿ ನೀರು ಬಳಕೆಯಾಗದಂತೆ ನದಿ ಪಾತ್ರದ ಇಕ್ಕೆಲ್ಲಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ರಾಜಾಪುರ ಬ್ಯಾರೇಜ್ನಿಂದ ಪ್ರತಿ 20 ಕಿ.ಮೀಗೊಂದು 24X7 ನಿರೀಕ್ಷಣಾ ತಂಡ ನಿಯೋಜನೆ ಮಾಡಲಾಗಿದ್ದು, ಸಂಬಂಧಿತ ಗ್ರಾಮದ ಪಿಡಿಓ, ತಹಶೀಲ್ದಾರರು ಮತ್ತು ಉಪವಿಭಾಗಾಧಿಕಾರಿಗಳು ಸೂಕ್ತ ಉಸ್ತುವಾರಿ ವಹಿಸಲಿದ್ದಾರೆ’ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.