ರಾಷ್ಟ್ರೀಯ

ನಾನೇನು ಹೆದರುವುದಿಲ್ಲ: ಸೋನಿಯಾ

Pinterest LinkedIn Tumblr

Soninininiನವದೆಹಲಿ (ಪಿಟಿಐ): ‘ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲಾ ಆಧಾರ ರಹಿತ. ಈ ಆರೋಪಗಳಿಗೆಲ್ಲಾ ನಾನು ಹೆದರುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಸಂಸತ್‌ ಭವನದ ಹೊರಗೆ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನನ್ನ ತೇಜೋವಧೆ ಮಾಡುವ ಉದ್ದೇಶದಿಂದಲೇ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧದ ಯಾವುದೇ ಆರೋಪದಲ್ಲೂ ಹುರುಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಏನು ಆಧಾರವಿದೆ? ಅವರು (ಬಿಜೆಪಿ) ಸುಳ್ಳು ಹೇಳುತ್ತಿದ್ದಾರೆ. ಮತ್ತೊಬ್ಬರ ತೇಜೋವಧೆ ಮಾಡಿ ತೃಪ್ತಿ ಪಡುವ ಸ್ವಭಾವ ಅವರದ್ದು’ ಎಂದು ಸೋನಿಯಾ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

‘ಎರಡು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇಷ್ಟು ದಿನ ಅವರೇನು ಮಾಡುತ್ತಿದ್ದರು? ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ಇನ್ನೂ ಏಕೆ ಪೂರ್ಣಗೊಳಿಸಿಲ್ಲ? ತನಿಖೆಯನ್ನು ಆದಷ್ಟು ಬೇಗ ನಿಸ್ಪಕ್ಷಪಾತವಾಗಿ ಪೂರ್ಣಗೊಳಿಸಿ’ ಎಂದು ಒತ್ತಾಯಿಸಿದ್ದಾರೆ.

ನಮ್ಮ ಬಳಿ ದಾಖಲೆ ಇದೆ: ಪರಿಕ್ಕರ್‌
‘ಯುಪಿಎ ಸರ್ಕಾರ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಆದೇಶ ಪ್ರತಿ ನಮ್ಮ ಬಳಿ ಇದೆ. ಅಲ್ಲದೆ ಇಟಲಿ ನ್ಯಾಯಾಲಯದ ಆದೇಶ ಪ್ರತಿ ನಮ್ಮ ಬಳಿ ಇದ್ದು ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದ್ದಾರೆ.

Write A Comment