ರಾಷ್ಟ್ರೀಯ

ಐಪಿಎಲ್‌ ಪಂದ್ಯಗಳ ಸ್ಥಳಾಂತರವೇ ಸೂಕ್ತ: ಸುಪ್ರೀಂಕೋರ್ಟ್‌

Pinterest LinkedIn Tumblr

IPLನವದೆಹಲಿ (ಪಿಟಿಐ): ಬಾಂಬೆ ಹೈಕೋರ್ಟ್‌ ನೀಡಿದ್ದ ಐಪಿಎಲ್‌ ಪಂದ್ಯಗಳ ಸ್ಥಳಾಂತರ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಹಾಗೂ ಮುಂಬೈ ಕ್ರಿಕೆಟ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಇದರಿಂದ ಬಾಂಬೆ ಹೈಕೋರ್ಟ್‌ ನಿರ್ಧಾರದಂತೆ ಐದು ಪಂದ್ಯಗಳನ್ನು ಮಹಾರಾಷ್ಟ್ರ ಆಚೆ ಸ್ಥಳಾಂತರಿಸುವುದು ಬಿಸಿಸಿಐಗೆ ಅನಿವಾರ್ಯವಾಗಿದೆ.

ಕುಡಿಯುವ ಹನಿ ನೀರೂ ಬಳಸದಂತೆ ಕಠಿಣ ಷರತ್ತು ವಿಧಿಸಿ ಪಂದ್ಯಗಳಿಗೆ ಅನುಮತಿ ನೀಡಲು ವಿಚಾರಣೆಯ ಆರಂಭದಲ್ಲಿ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್‌ ನೇತೃತ್ವ ಪೀಠವು ಒಲವು ತೋರಿತ್ತು.

ಆದರೆ, ನ್ಯಾಯಮೂರ್ತಿಗಳಾದ ಆರ್.ಬಾನುಮತಿ ಮತ್ತು ಯು.ಯು.ಲಲಿತ್ ಅವರನ್ನೂ ಒಳಗೊಂಡಿದ್ದ ಪೀಠ, ಬಳಿಕ ತನ್ನ ನಿರ್ಧಾರ ಬದಲಿಸಿತು. ಬಾಂಬೆ ಹೈಕೋರ್ಟ್‌ ಆದೇಶ ಎತ್ತಿಹಿಡಿದು ಅರ್ಜಿ ವಜಾಗೊಳಿಸಿತು.

ವಿಚಾರಣೆಯ ವೇಳೆ, ಮುಂಬೈ ಹಾಗೂ ಪುಣೆ ಕ್ರೀಡಾಂಗಣಗಳಿಗೆ ಕುಡಿಯುವ ನೀರನ್ನು ಬಳಸುವುದಿಲ್ಲ. ಬದಲಿಗೆ ಸಂಸ್ಕರಿಸದ ತ್ಯಾಜ ನೀರನ್ನೇ ಉಪಯೋಗಿಸುತ್ತೇವೆ ಎಂದು ಕ್ರಿಕೆಟ್ ಸಂಸ್ಥೆಗಳ ಪರ ವಹಿಸಿದ್ದ ಹಿರಿಯ ವಕೀಲರಾದ ಪಿ.ಚಿದಂಬರಂ ಹಾಗೂ ಎ.ಎಂ.ಸಿಂಘ್ವಿ ಅವರು ವಾದಿಸಿದರು. ಬಾಂಬೆ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಕೋರಿದರು.

ಈ ವೇಳೆ ನ್ಯಾಯಾಲಯ, 60 ಲಕ್ಷ ಲೀಟರ್ ನೀರು ಬೇಕಾಗುತ್ತದೆ ಎಂಬ ಆರೋಪದ ಕುರಿತು ವಿವರಣೆ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಚಿದಂಬರಂ, ಕ್ರೀಡಾಂಗಣಗಳಿಗೆ ನಿತ್ಯವೂ 10 ಸಾವಿರ ಲೀಟರ್‌ ಲೆಕ್ಕದಂತೆ ಆರು ದಿನಗಳ ಅವಧಿಗೆ ಬೇಕಾಗುತ್ತದೆ ಎಂದರು.

ಇದಕ್ಕೆ ಪೀಠವು, ‘ಕ್ರೀಡಾಂಗಣಕ್ಕೆ ಇರುವ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸುತ್ತೇವೆ. ಕುಡಿಯುವ ಹನಿ ನೀರೂ ಬಳಸಬಾರದು. ಇದನ್ನು ನೋಡಿಕೊಳ್ಳಲು ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸುತ್ತೇವೆ. ಪೊಲೀಸರ ನೆರವಿನೊಂದಿಗೆ ಅವರು ಕಾರ್ಯನಿರ್ವಹಿಸುತ್ತಾರೆ’ ಎಂದಿತು.

ಆದರೆ ಮರುಕ್ಷಣವೇ, ಇಷ್ಟೆಲ್ಲ ಕಸರತ್ತು ಮಾಡುವ ಬದಲಿಗೆ ಪಂದ್ಯಗಳ ಸ್ಥಳಾಂತರವೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿತು.

Write A Comment