ಕರ್ನಾಟಕ

ವೃದ್ಧ ದಂಪತಿಯನ್ನು ಕೊಲೆ ಪ್ರಕರಣ : 24 ಗಂಟೆಯೊಳಗೆ ಆರೋಪಿ ಬಂಧನ

Pinterest LinkedIn Tumblr

poಬೆಂಗಳೂರು, ಏ.26- ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿರುವ ಪುಲಕೇಶಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಜಿ ಹಳ್ಳಿಯ ನಿವಾಸಿ ಪ್ರೇಮ್‌ಚಂದ್ ಜೈನ್ (35) ಬಂಧಿತ ಆರೋಪಿ. ಘಟನೆ ವಿವರ: ಏ.22ರಂದು ದುಷ್ಕರ್ಮಿಗಳು ಪುಲಕೇಶಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡದ ಮೂರನೆ ಮಹಡಿಯಲ್ಲಿ ವಾಸವಾಗಿದ್ದ ಪರ್ವತ್‌ರಾಜ್ ಮತ್ತು ಚಂದ್ರಕಲಾ ದಂಪತಿಯನ್ನು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿ ಮನೆಯ ಮುಂಬಾಗಿಲ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.

ಏ.24ರಂದು ಇವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಂಶಯಗೊಂಡು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಮೇಘರಿಕ್, ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತ ಹರಿಶೇಖರನ್‌ರವರು ಆರು ತಂಡಗಳನ್ನು ಪೂರ್ವ ವಿಭಾಗದ ಡಿಸಿಪಿ ಸತೀಶ್‌ಕುಮಾರ್ ನೇತೃತ್ವದಲ್ಲಿ ರಚಿಸಿದ್ದರು.

ಈ ತಂಡ ಮೃತರ ಸಂಬಂಧಿಕರು, ಆತ್ಮೀಯರು, ಹಿತೈಷಿಗಳು, ನೆರೆಹೊರೆಯವರನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸಿದಾಗ ಈ ದಂಪತಿಯ ಆತ್ಮೀಯ ವಲಯದಲ್ಲಿಯೇ ಕೊಲೆ ನಡೆದಿರುವುದನ್ನು ಕಾತರಿಪಡಿಸಿಕೊಂಡಿದೆ. ಇವರ ಮನೆಗೆ ಆಗಿಂದಾಗ್ಗೆ ಬರುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಾಂತ್ರಿಕ ವಿಭಾಗದ ಸಹಾಯ ಪಡೆದು ಆರೋಪಿಗಳ ಚಲನ-ವಲನಗಳ ಬಗ್ಗೆ ತನಿಖೆ ನಡೆಸುವಾಗ ಪ್ರೇಮ್‌ಚಂದ್ ಜೈನ್ ಎಂಬಾತನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ತನ್ನ ಸಹಚರ ಚಂದ್ರಶೇಖರ್ ಎಂಬುವನೊಂದಿಗೆ ಸೇರಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಪ್ರೇಮ್‌ಚಂದ್ ಜೈನ್ ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ಈ ದಂಪತಿ ಕುಟುಂಬಕ್ಕೆ ಆತ್ಮೀಯನಾಗಿದ್ದ, ಆಗಾಗ್ಗೆ ಇವರಿಂದ ಸಾಲ ಪಡೆಯುತ್ತಿದ್ದನು. ಈ ದಂಪತಿ ಬಳಿ ಅಪಾರ ಹಣ-ಆಭರಣ ಇರುವುದೆಂದು ಭಾವಿಸಿ ಸಹಚರ ಚಂದ್ರಶೇಖರ್‌ನೊಂದಿಗೆ ಸೇರಿ ಒಳಸಂಚು ನಡೆಸಿ ಇವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿ ಪ್ರೇಮ್‌ಚಂದ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಈತನಿಗೆ ಹಣದ ಅವಶ್ಯಕತೆಯಿದ್ದು, ಸ್ನೇಹಿತ ಚಂದ್ರಶೇಖರ್‌ನಿಗೂ ಹಣದ ಅವಶ್ಯಕತೆ ಇದ್ದುದರಿಂದ ಸಾಲದ ರೂಪದಲ್ಲಿ ಹಣ ಕೊಡಿಸುವಂತೆ ಕೇಳಿಕೊಂಡಿದ್ದನು.

ಏ.22ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವೃದ್ಧ ದಂಪತಿ ಪರ್ವತ್‌ರಾಜ್ ಮತ್ತು ಚಂದ್ರಕಲಾ ಅವರ ಮನೆಗೆ ಬಂದು ಸಾಲವಾಗಿ ಹಣ ಕೇಳಿದ್ದಾರೆ. ಚಂದ್ರಕಲಾ ಅವರು ಚಿನ್ನ ಒತ್ತೆ ಇಟ್ಟರೆ ಸಾಲ ನೀಡುವುದಾಗಿ ತಿಳಿಸಿದ್ದರಿಂದ ಚಿನ್ನಾಭರಣ ತರುವುದಾಗಿ ಹೇಳಿ ಹೋಗಿದ್ದು, ಮತ್ತೆ ಸಂಜೆ 6 ಗಂಟೆಗೆ ವಾಪಸ್ ಇವರಿಬ್ಬರೂ ದಂಪತಿ ಮನೆಗೆ ಬಂದಿದ್ದಾರೆ. ಆಭರಣ ತಂದಿರುವುದಾಗಿ ಹೇಳಿ ಹಣ ಕೊಡುವಂತೆ ಕೇಳಿದಾಗ ಚಂದ್ರಕಲಾ ಅವರು ಮೊದಲು ಆಭರಣ ಕೊಡಿ, ನಂತರ ನಾನು ಹಣ ನೀಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಇವರು ದಂಪತಿಗೆ ಚಾಕುವಿನಿಂದ ಮನಬಂದಂತೆ ಹಲವಾರು ಬಾರಿ ಇರಿದು ಕೊಲೆ ಮಾಡಿ ಅವರ ಮನೆಯಲ್ಲಿದ್ದ 50 ಸಾವಿರ ರೂ. ಹಣ, ಚಿನ್ನಾಭರಣ ದೋಚಿಕೊಂಡು ಯಾರಿಗೂ ಅನುಮಾನ ಬಾರದಂತೆ ಮನೆಯಲ್ಲಿದ್ದ ಬೀಗಗಳನ್ನು ತೆಗೆದುಕೊಂಡು ಬಾಗಿಲುಗಳಿಗೆ ಬೀಗಗಳನ್ನು ಹಾಕಿ ಅಲ್ಲಿಂದ ತಲೆಮರೆಸಿಕೊಂಡಿದ್ದರು.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಚಂದ್ರಶೇಖರ್ ನಾಲ್ಕು ವರ್ಷಗಳಿಂದ ಪ್ರೇಮ್‌ಚಂದ್‌ಗೆ ಸ್ನೇಹಿತನಾಗಿದ್ದು, ಈತ ಲೈವ್‌ಬ್ಯಾಂಡ್ ಮತ್ತು ಜೂಜಾಟವಾಡುವ ಚಟ ಹೊಂದಿದ್ದಾನೆ. ಈತನ ಪತ್ತೆಗಾಗಿ ವಿಶೇಷ ತಂಡವನ್ನು ನೇಮಿಸಿ ಅಂತಾರಾಜ್ಯಕ್ಕೆ ಕಳುಹಿಸಲಾಗಿದೆ. ಪುಲಕೇಶಿನಗರ ಉಪವಿಭಾಗದ ಎಸಿಪಿ ನೂರುಲ್ಲಾ ಶರೀಫ್, ಕೆಆರ್ ಪುರ ಉಪವಿಭಾಗದ ಎಸಿಪಿ ಬದ್ರಿನಾಥ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಮೇಶ್, ವೀರೇಂದ್ರ ಕುಮಾರ್, ಕುಲಕರ್ಣಿ, ನಾಗರಾಜ್ ಮತ್ತು ಪಿಎಸ್‌ಐಗಳಾದ ನಾರಾಯಣಸ್ವಾಮಿ, ಗೌರಿಶಂಕರ್, ಸುದರ್ಶನ ಶೆಟ್ಟಿ , ಮಿರ್ಜಾ ಇಸ್ಮಾಯಿಲ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೂಕ್ತ ಬಹುಮಾನ: ಗಂಭೀರ ಸ್ವರೂಪದ ಈ ಪ್ರಕರಣವನ್ನು 24 ಗಂಟೆಯೊಳಗೆ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಮಾಡಲು ಯಶಸ್ವಿಯಾದ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ಸೂಕ್ತ ಬಹುಮಾನ ಘೋಷಿಸಿದ್ದಾರೆ.

Write A Comment