ಕರ್ನಾಟಕ

ಮೆಟ್ರೋ ಸುರಂಗಮಾರ್ಗ ಸಂಚಾರಕ್ಕೆ ಮುಹೂರ್ತ

Pinterest LinkedIn Tumblr
A VIEW OF UNDER PASS  METRO WORK AT V.SOUDHA
A VIEW OF UNDER PASS METRO WORK AT V.SOUDHA

ಬೆಂಗಳೂರು, ಏ. ೨೬- ಬಹು ನಿರೀಕ್ಷಿತ ನಮ್ಮ ಮೆಟ್ರೋ ಮೊದಲ ಹಂತದ ಪೂರ್ವ- ಪಶ್ಚಿಮ ಕಾರಿಡಾರ್‌ನ ಸುರಂಗಮಾರ್ಗದ ಉದ್ಘಾಟನೆ ಇದೇ ೨೯ ರಂದು ನಡೆಯಲಿದ್ದು, ಮರು ದಿನದಿಂದ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.
೨೯ ರಂದು ಸಂಜೆ ೬ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರು ಎಂಜಿ ರಸ್ತೆಯಿಂದ ಮಾಗಡಿ ರಸ್ತೆಯವರೆಗಿನ ಸುರಂಗ ಮಾರ್ಗದ ಸಂಚಾರಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
೫.೧೨ ಕಿ.ಮೀ ಉದ್ದದ ಈ ಸುರಂಗಮಾರ್ಗ
ದಲ್ಲಿ ೫ ನಿಲ್ದಾಣಗಳು ಬರಲಿವೆ ಎಂದ ಅವರು ಈ ಸುರಂಗ ಸಂಪರ್ಕದಿಂದಾಗಿ ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿವರೆಗೆ ಪ್ರಯಾಣಿಕರು ಸಂಚರಿಸಬಹುದಾಗಿದೆ ಎಂದು ಹೇಳಿದರು.
ಉತ್ತರ- ದಕ್ಷಿಣ ಕಾರಿಡಾರ್‌ನ ಕಾಮಗಾರಿ ಸ್ವಲ್ಪ ಬಾಕಿ ಉಳಿದಿದ್ದು, ಅದನ್ನು ಮೂಱ್ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಿ ನವೆಂಬರ್ ೧ರ ಕನ್ನಡ ರಾಜ್ಯೋತ್ಸವಕ್ಕೆ ಮೆಟ್ರೋ ಮೊದಲ ಹಂತವನ್ನು ಸಂಪೂರ್ಣ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ರಾಜ್ಯಸರ್ಕಾರದಿಂದ ಬೆಂಗಳೂರು ಜನತೆಗೆ ನೀಡುತ್ತಿರುವ ಮಹೋನ್ನತ ಕೊಡುಗೆಯಾಗಿದೆ ಎಂದು ಹೇಳಿದರು.
ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್
ಕರೋಲಾ ಮಾತನಾಡಿ ೨೦೦೦ ಮೇನಲ್ಲಿ ಆರಂಭವಾದ ಕೆಲಸ ೨೦೧೪ಕ್ಕೆ ಸುರಂಗ ಕೊರೆಯುವ ಕೆಲಸ ಮುಕ್ತಾಯವಾಯಿತು. ಈ ಸುರಂಗ ಮಾರ್ಗದಲ್ಲಿ ಗಟ್ಟಿ ಕಲ್ಲು ಸಿಕ್ಕಿದ್ದರಿಂದ ಮಾರ್ಗರೇಟ್ ಮತ್ತು ಹೆಲೆನ್ ಸುರಂಗ ಕೊರೆಯುವ ಯಂತ್ರಗಳು ೩ ವರ್ಷ ತೆಗೆದುಕೊಂಡಿವೆ. ಸುಮಾರು ೧೦೪ ವಿದೇಶಿ ತಂತ್ರಜ್ಞರು ಕಾರ್ಯನಿರ್ವಹಿಸಿದ್ದಾರೆ ಎಂದರು.
ಸುರಂಗ ಮಾರ್ಗದಲ್ಲಿ ಬರುವ ೫ ನಿಲ್ದಾಣಗಳಲ್ಲಿ ಪ್ರತಿಯೊಂದು ನಿಲ್ದಾಣ ೩೦೦ ಮೀ. ಉದ್ದ, ೨೫ ಮೀ. ಅಗಲ ಹೊಂದಿವೆ ಎಂದರು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ೧೦ ಎಕರೆ ವಿಸ್ತೀರ್ಣದಲ್ಲಿದ್ದು, ೧೨ ಮೆಟ್ಟಿಲು ಮಾರ್ಗಗಳು, ೧೮ ತುರ್ತು ಮಾರ್ಗಗಳು ಹಾಗೂ ೨೪ ಎಕ್ಸಲೇಟರ್‌ಗಳು ಇವೆ, ಪೂರ್ವ- ಪಶ್ಚಿಮ ನಿಲ್ದಾಣ ೩೬೫ ಮೀ. ಉದ್ದ ಹೊಂದಿದ್ದು, ಉತ್ತರ- ದಕ್ಷಿಣ ನಿಲ್ದಾಣ ೪೦೦ ಮೀ. ಉದ್ದ ಹೊಂದಿದೆ ಎಂದರು.
ಈ ನಿಲ್ದಾಣದಲ್ಲಿ ೧೬೦೦ ಕಾರ್ಮಿಕರು, ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಇದೇ ೨೯ಕ್ಕೆ ಮೆಟ್ರೋ ಮೊದಲ ಹಂತದ ಪೂರ್ವ- ಪಶ್ಚಿಮ ಕಾರಿಡಾರ್‌ಗೆ ಚಾಲನೆ ಸಿಕ್ಕ ಬಳಿಕ ೩೦ ರಿಂದ ಜನರ ಸಂಚಾರಕ್ಕೆ ಮುಕ್ತವಾಗಲಿದೆ. ಪ್ರತಿ ೧೦ ನಿಮಿಷಕ್ಕೊಂದು ರೈಲು ಸಂಚಾರ ನಡೆಸಲಿವೆ ಎಂದರು.

Write A Comment