ಕರ್ನಾಟಕ

ಸಚಿವ ಜಯಚಂದ್ರಗೆ ಎಸ್‌ಎಂಕೆ ಪತ್ರ

Pinterest LinkedIn Tumblr

s.m.krishnaಬೆಂಗಳೂರು, ಏ. ೨೬- ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನೀರಿನ ಬವಣೆಯನ್ನು ನೀಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಂಡ್ಯ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ನಡೆಸಲಿರುವ ಸಚಿವ ಟಿ.ಬಿ. ಜಯಚಂದ್ರರವರಿಗೆ ಪತ್ರ ಬರೆದಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹಲವಾರು ಏತ ನೀರಾವರಿ ಯೋಜನೆಗಳನ್ನು ಕಾರ್ಯರೂಪಗೊಳಿಸಿ ಅನುಷ್ಠಾನಗೊಳಿಸಿದ್ದೆ.
ಆದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳ ಅವಧಿಯಲ್ಲಿ ಸದರಿ ಯೋಜನೆಗಳು ಸೂಕ್ತ ನಿರ್ವಹಣೆ ಇಲ್ಲದೆ ಆ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿರುವುದು ಆಘಾತಕಾರಿ ಎಂದು ಎಸ್.ಎಂ. ಕೃಷ್ಣ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಮದ್ದೂರು ತಾಲ್ಲೂಕು ಆತಗೂರು- ಮಾಚಹಳ್ಳಿ ಕೆರೆ ಹಾಗೂ ಕೆ. ಹೊನ್ನಾಲಗೆರೆ ಸುತ್ತಲಿನ ಗ್ರಾಮಗಳ ಕೆರೆಗಳಿಗೆ ನೀರುಣಿಸಲು ರೂಪಿಸಿದ್ದ ಬಾಣೋಜಿಪಂತ್ ಮತ್ತು ಆತನೂರು ಏತ ನೀರಾವರಿ ಅನುಷ್ಠಾನಗೊಂಡಿದ್ದರು ಅಧಿಕಾರಸ್ಥರ ನಿರಾಸಕ್ತಿಯಿಂದ ಜನರಿಗೆ ತಲುಪಲು ವಿಫಲವಾಗಿದೆ.
ಅದೇ ರೀತಿ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಬಳಿಯ ಬನ್ನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ೧೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದ ಬರ ಅಧ್ಯಯನ ಸಮಿತಿಯ ಅಧ್ಯಕ್ಷರಾದ ತಾವು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಲು ಖುದ್ದಾಗಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಸ್.ಎಂ. ಕೃಷ್ಣ, ಜಯಚಂದ್ರರವರಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Write A Comment