ಕರ್ನಾಟಕ

ಬಲ್ಲಪ್ಪನಹಟ್ಟಿಯಲ್ಲಿ ಆಂತ್ರಾಕ್ಸ್ ರೋಗಕ್ಕೆ ನೂರಾರು ಕುರಿಗಳ ಬಲಿ

Pinterest LinkedIn Tumblr

goatಹುಳಿಯಾರು, ಏ.25- ಆಂತ್ರಾಕ್ಸ್ ಕಾಯಿಲೆಗೆ ನೂರಾರು ಕುರಿಗಳು ಸಾವನ್ನಪ್ಪಿ ಇನ್ನೂ 60ಕ್ಕೂ ಹೆಚ್ಚು ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಹುಳಿಯಾರು ಹೋಬಳಿ ದಸೂಡಿ ಗ್ರಾಪಂ ವ್ಯಾಪ್ತಿಯ ಬಲ್ಲಪ್ಪನಹಟ್ಟಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ದಿಂಡಾವರ ಬಾಲದೇವರಹಟ್ಟಿಯ ಕುರಿಗಾಯಿಗಳಾದ ಕುಂಟಪ್ಪ, ಜಯಮ್ಮ ಹಾಗೂ ಕರಿಯಣ್ಣ ಅವರಿಗೆ ಸೇರಿದ ಕುರಿಗಳು ಆಂತ್ರಾಕ್ಸ್ ರೋಗಕ್ಕೆ ಬಲಿಯಾಗಿವೆ. ಇವರು ಜೀವನ ನಿರ್ವಹಣೆಗಾಗಿ ಕುರಿ ಹೊಡೆದುಕೊಂಡು ಚಿಕ್ಕನಾಯ್ಕನಹಳ್ಳಿ ತಾಲೂಕಿನ ದಸೂಡಿ ಪಂಚಾಯ್ತಿಗೆ ವಲಸೆ ಬಂದು ವಿವಿಧ ರೈತರ ಜಮೀನಿನಲ್ಲಿ ತಿಂಗಳಿಂದ ಮಂದೆ ಬಿಟ್ಟಿದ್ದರು.

ಐದು ದಿನಗಳಿಂದ ದಸೂಡಿ ವಾಸಿಯ ಪುರದಪ್ಪನವರಿಗೆ ಸೇರಿದ ಬಲ್ಲಪ್ಪನಹಟ್ಟಿಯ ತೋಟದಲ್ಲಿ ಮಂದೆ ಹಾಕಿದ್ದರು. ಬೆಳಗ್ಗೆ ಸುತ್ತಮುತ್ತಲ ಬಾರೆಯಲ್ಲಿ ಕುರಿ ಮೇಯಿಸಿಕೊಂಡು ಬಂದು ರಾತ್ರಿ ಮಂದೆ ಹಾಕುತಿದ್ದರು. ಆದರೆ, ಇದ್ದಕ್ಕಿದ್ದ ಹಾಗೆ ಶನಿವಾರ ರಾತ್ರಿ 5 ಕುರಿಗಳಿಗೆ ಹೊಟ್ಟೆ ಉಬ್ಬರ ಬಂದು ಸಾವನ್ನಪ್ಪಿದವು. ಆತಂಕಗೊಂಡ ಕುರಿಗಾಹಿಗಳು ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಅವರೆಲ್ಲ ಬೆಳಿಗ್ಗೆ ಜಮಾವಣೆಗೊಳ್ಳುವಷ್ಟರಲ್ಲಿ 50ಕ್ಕೂ ಹೆಚ್ಚು ಕುರಿಗಳು ಸರಣಿಯಾಗಿ ಸಾವನ್ನಪ್ಪಿವೆ.

ವೈದ್ಯರಿಗೆ ರಾತ್ರಿಯಿಡಿ ದೂರವಾಣಿ ಕರೆ ಮಾಡಿದರೂ ಸ್ಪಂದನೆಯಿಲ್ಲದೆ ನಿರ್ಲಕ್ಷ್ಯಿಸಿದ್ದಾರೆ. ಬೆಳಿಗ್ಗೆ 11ರ ಸುಮಾರಿನಲ್ಲಿ ನೂರಾರು ಕುರಿಗಳು ಸಾವನ್ನಪ್ಪಿದ್ದು, ಜನಪ್ರತಿನಿಧಿಗಳು, ಸ್ಥಳೀಯರು ಪಶು ವೈದ್ಯರನ್ನು ದೂರವಾಣಿ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಾಗ ವೈದ್ಯರ ತಂಡ ದೌಡಾಯಿಸಿ ವಾಕ್ಸಿನ್ ಮಾಡಿ ಕುರಿಗಾಯಿಗಳಿಗೆ ಕೆಲ ಸಲಹೆ ಸೂಚನೆ ನೀಡಿದ್ದಾರೆ. ಸಾವಿಗೆ ಕಾರಣ ತಿಳಿಯಲು ಸತ್ತ ಕುರಿಗಳ ಕಿಡ್ನಿ, ಲಿವರ್ ಹಾಗೂ ರಕ್ತವನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ದಿಕ್ಕೇ ತೋಚದಾಗಿದೆ: ನಮಗೆ ಕುರಿ ಸಾಕಾಣೆಯೇ ಜೀವನಾಧಾರ. ನಮ್ಮೂರಲ್ಲಿ ಮೇವಿನ ಕೊರತೆಯಿದ್ದು, ಹತ್ತಿಪ್ಪತ್ತು ವರ್ಷಗಳಿಂದ ಬೇಸಿಗೆಯಲ್ಲಿ ಊರೂರ ಮೇಲೆ ಕುರಿ ಹೊಡ್ಕೊಂಡು ಹೋಗಿ ಮೇಯಿಸಿಕೊಂಡು ಮಳೆಗಾಲದಲ್ಲಿ ನಮ್ಮೂರಿಗೆ ಹಿಂದಿರುತ್ತೇವೆ. ಇಷ್ಟು ವರ್ಷದಲ್ಲಿ ಎಂದೂ ಈ ರೀತಿ ವಿಚಿತ್ರವಾಗಿ ನೂರಾರು ಕುರಿಗಳು ಸಾವನ್ನಪ್ಪಿರಲಿಲ್ಲ. ಎಂದಿನಂತೆ ಬಾರೆ ಮೇಲೆ ಮೇಯಿಸಿಕೊಂಡು ಬಂದು ಮಂದೆ ಹಾಕಿದಾಗ ಕುರಿಗಳು ಸಾವನ್ನಪ್ಪಿದವು. ಈ ಕುರಿಗಳೇ ನಮ್ಮ ಜೀವನಾಧಾರವಾಗಿದ್ದು, ನೂರಾರು ಕುರಿಗಳು ಸಾವನ್ನಪ್ಪಿರುವುದಿಂದ ನಮಗೆ ದಿಕ್ಕೇ ತೋಚದಾಗಿದೆ ಎಂದು ಕುರಿಗಾಯಿ ಕುಂಟಪ್ಪ ಅಳಲು ತೋಡಿಕೊಂಡಿದ್ದಾರೆ.

Write A Comment