ಕರ್ನಾಟಕ

ಸಿಎಂ ಆಗಿದ್ದು ಜನರಿಂದ : ಲೋಕಾಯುಕ್ತದಿಂದಲ್ಲ, ಪೂಜಾರಿಗೆ ಸಿದ್ದು ತಿರುಗೇಟು

Pinterest LinkedIn Tumblr

Siddu-2ಬೆಳಗಾವಿ, ಏ. ೨೫ – ನಾನು ಜನರಿಂದ ಮುಖ್ಯಮಂತ್ರಿ ಆಗಿದ್ದೇನೆ ಹೊರತು, ಲೋಕಾಯುಕ್ತ ಸಂಸ್ಥೆಯಿಂದಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಡುಗುವ ಮೂಲಕ ತಮ್ಮ ವಿರುದ್ಧ ನಿಂತಿರುವ ಕಾಂಗ್ರೆಸ್‌ನ ಕೆಲ ನಾಯಕರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಯಾರೇ ಆಗಲಿ ಮುಖ್ಯಮಂತ್ರಿಯಾಗುವುದು ಜನರಿಂದ, ಲೋಕಾಯುಕ್ತದಂತಹ ಯಾವುದೇ ಶಾಸನಬದ್ಧ ಸಂಸ್ಥೆಗಳಿಂದ ಅಲ್ಲ, ನಾನೂ ಸಹ ಜನರಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದೇನೆ, ಮುಖ್ಯಮಂತ್ರಿಯಾಗಲು ಜನ ಕಾರಣ ಹೊರತು, ಲೋಕಾಯುಕ್ತರ ಸಂಸ್ಥೆಯಲ್ಲ ಎಂದು ಅವರು ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸುವ ನಾಯಕರಿಗೆ ತಿರುಗೇಟು ನೀಡಿದರು.
ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಇಂದಿನಿಂದ 2ನೇ ಹಂತದ ಅಧ್ಯಯನ ಪ್ರವಾಸ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಬೆಳಗಾವಿಗೆ ಆಗಮಿಸಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಜನರಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿ ಎಂದರು.
ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಎಸಿಬಿ ರಚನೆ ಮಾಡಲಾಗಿದೆ ಇದು ಸರಿಯಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ ಅವರು, ಹಲವು ಬಾರಿ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿ, ಎಸಿಬಿಗೆ ನಿಮ್ಮ ಪಕ್ಷದವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂದಾಗ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿರುವುದು ಜನರಿಂದ, ಜನರಿಗೆ ಒಳ್ಳೆಯದು ಮಾಡುವುದಷ್ಟೇ ನನ್ನ ಕೆಲಸ, ಒಳ್ಳೆಯದನ್ನು ಮಾಡೇ ಮಾಡುತ್ತೇನೆ ಎಂದು ಗಡುಸಾಗಿ ಉತ್ತರಿಸಿದರು.
ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಈಗಾಗಲೇ ಸಚಿವ ಸಂಪುಟದ ಉಪ ಸಮಿತಿಗಳನ್ನು ರಚಿಸಿದ್ದೇನೆ. ವಿಭಾಗಾವಾರು ಮಟ್ಟದಲ್ಲಿ ರಚಿಸಲಾಗಿರುವ 4 ಸಂಪುಟ ಉಪ ಸಮಿತಿಗಳು ಈಗಾಗಲೇ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿವೆ. ಈ ಸಮಿತಿಯ ವರದಿ ಬಂದ ನಂತರ ಬರ ಪರಿಹಾರ ಕಾಮಗಾರಿಗಳು ಮತ್ತಷ್ಟು ಚುರುಕು ಪಡೆಯಲಿವೆ ಎಂದರು.
ಈ ಸಂಪುಟ ಉಪ ಸಮಿತಿ ಈ ತಿಂಗಳ 30ರ ಒಳಗೆ ವರದಿ ಸಲ್ಲಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಪರ ಪರಿಸ್ಥಿತಿ ಅಧ್ಯಯನ ಪರಿಹಾರ ಕಾಮಗಾರಿಗಳ ಅವಲೋಕನವನ್ನು ನಾನು ಖುದ್ದು ನಡೆಸಿದ್ದೇನೆ. ಇಂದಿನಿಂದ 2ನೇ ಹಂತದ ಬರ ಅಧ್ಯಯನ ಪ್ರವಾಸವನ್ನು ಕೈಗೊಂಡಿರುವುದಾಗಿ ಅವರು ಹೇಳಿದರು.
ಬರ ಅಧ್ಯಯನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಿ ನೇರವಾಗಿ ಅವರು ಸಾಂಬ್ರಾ ವಿಮಾನ ನಿಲ್ದಾಣದಿಂದ ಬರ ಪೀಡಿತ ಅಂಬೇವಾಡಿ ಗ್ರಾಮಕ್ಕೆ ತೆರಳಿದರು. ನಂತರ ಹುಕ್ಕೇರಿ ತಾಲೂಕಿನ ನರಸಿಂಗಪುರ, ಖಾರಿ ಮಠ, ಹುಲ್ಲೋಳಿಹಟ್ಟಿ, ಹಾಗೂ ಚಿಕ್ಕೋಡಿ ತಾಲೂಕಿನ ನಾಗರಮನೋಳಿ ಗ್ರಾಮಗಳಿಗೆ ತೆರಳಿ ಮುಖ್ಯಮಂತ್ರಿಗಳು ಬರ ಅಧ್ಯಯನ ನಡೆಸಿದರು.
ಸಚಿವ ಸತೀಶ ಜಾರಕಿಹೊಳಿ, ಅಧಿಕಾರಿಗಳು ಜೊತೆಗಿದ್ದರು.

Write A Comment