ಕರ್ನಾಟಕ

ಬೆಳಗಾವಿಯಲ್ಲಿ ಸರಣಿ ಅಪಘಾತ; ಇಬ್ಬರು ಮಹಿಳೆ ಸೇರಿದಂತೆ ನಾಲ್ವರು ಬಲಿ

Pinterest LinkedIn Tumblr

belgavi

ಬೆಳಗಾವಿ: ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್‌, ಟಾಟಾ ಏಸ್‌, ಲಾರಿ ಮತ್ತು ಬೈಕ್‌ ನಡುವಿನ ಸರಣಿ ಅಪಘಾತದಲ್ಲಿ ಇಬ್ಬರು ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಸೋಮನಟ್ಟಿ ಗ್ರಾಮದ ಪರಿವರ್ತನಾ ಶಾಲೆಯ ಎದುರಿನ ಬಾಚಿ– ರಾಯಚೂರು ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕೊಳೂರು ಗ್ರಾಮದ ಕಮಲವ್ವ ಬಸನಿಂಗಪ್ಪ ಗುಗ್ಗರಿ (45), ಬಸವ್ವ ಬಸಪ್ಪ ಗುಗ್ಗರಿ (50), ನಾಗೇಶ ರಾಚಪ್ಪ ಕೊಳಲಗಿ (40) ಹಾಗೂ ಜಮಂಖಡಿ ತಾಲ್ಲೂಕಿನ ಶಾರದಾ ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕ ಮಹಾದೇವ ನ್ಯಾಮಗೌಡರ (40) ಮೃತರು.

ಈ ನಾಲ್ವರು ಆಂಬಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಟಾಟಾ ಏಸ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯರಗಟ್ಟಿ ಗ್ರಾಮದ ಸುಮಾರು 20 ಜನ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ನಡೆದ ಬಗೆ: ಅನಾರೋಗ್ಯದಿಂದ ಬಳಲುತ್ತಿದ್ದ ಕಮಲವ್ವ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು.

ಮತ್ತೊಂದಡೆ, ಸಂಬಂಧಿಕರೊಬ್ಬರ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಯರಗಟ್ಟಿಯ ಒಂಟೇರ ಓಣಿಯ 20 ಜನರು ಟಾಟಾ ಏಸ್‌ ವಾಹನದಲ್ಲಿ ಹೊರಟಿದ್ದರು.

ಈ ವೇಳೆ, ಸೋಮನಟ್ಟಿ ಗ್ರಾಮದ ಪರಿವರ್ತನಾ ಶಾಲೆಯ ಎದುರಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಟಾಟಾ ಏಸ್‌ ವಾಹನವನ್ನು ಆಂಬುಲೆನ್ಸ್‌ ಹಿಂದಿಕ್ಕುವಾಗ ಎದುರಿನಿಂದ ಲಾರಿ ಬಂದಿದೆ.

ಲಾರಿ ಮತ್ತು ಆಂಬುಲೆನ್ಸ್‌ ನಡುವೆ ಮುಖಾಮುಖಿ ಅಪ್ಪಳಿಸಿವೆ. ಡಿಕ್ಕಿಯ ಹೊಡೆತಕ್ಕೆ ಆಂಬುಲೆನ್ಸ್‌ ಚಿಮ್ಮಿ ರಸ್ತೆಯ ಪಕ್ಕಕ್ಕೆ ಹೋಗಿ ಬಿದ್ದಿದೆ.

ನುಜ್ಜುಗುಜ್ಜಾದ ಆಂಬುಲೆನ್ಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ, ಚಾಲಕನ ನಿಯಂತ್ರಂಣ ತಪ್ಪಿ ಟಾಟಾ ಏಸ್‌ ವಾಹನವು ಪಲ್ಟಿಯಾಗಿ ರಸ್ತೆಯ ಪಕ್ಕಕ್ಕೆ ಹೋಗಿ ಬಿದ್ದಿದೆ.

ಈ ವಾಹನಗಳ ಬಳಿ ಇದ್ದ ದ್ವಿಚಕ್ರವಾಹನವು ಉರುಳಿ ಬಿದ್ದಿದ್ದು, ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ನೇಸರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment