ಕರ್ನಾಟಕ

ಬಯಲು ಶೌಚ ಅಂತ್ಯ : 2018 ರೊಳಗೆ ಗುರಿ ಸಾಧಿಸಲು ಸರ್ಕಾರದ ಪಣ

Pinterest LinkedIn Tumblr

toiletದಾವಣಗೆರೆ, ಏ. 23 – 2018 ರೊಳಗೆ ಬಯಲು ಶೌಚಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಪಣತೊಟ್ಟಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾಷ್ಟ್ರೀಯ ಪಂಚಾಯತ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮೋದಯದಿಂದ ಭಾರತದ ಉದಯ ಅಭಿಯಾನದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ 22 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನು 30 ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಿದೆ. 2018ರ ವೇಳೆಗೆ ರಾಜ್ಯವನ್ನು ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಲಾಗಿದೆ. ಜನರಿಗೆ ಅಧಿಕಾರ ನೀಡುವ ಉದ್ದೇಶದಿಂದ ಗ್ರಾಮ ಸ್ವರಾಜ್ ಕಾನೂನನ್ನು ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಕುಳಿತು ಯೋಜನೆಗಳು ರೂಪಿತವಾಗುತ್ತಿದ್ದವು. ಆದರೆ ಇದೀಗ ಗ್ರಾಮ ಸ್ವರಾಜ್ ಕಾಯ್ದೆ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಯೋಜನೆ ರೂಪಿಸುವ ಅಧಿಕಾರ ನೀಡಿದೆ. ತಳಮಟ್ಟದಿಂದ ಮೇಲ್ಮಟ್ಟಕ್ಕೆ ಯೋಜನೆಗಳು ಜಾರಿಯಾಗುತ್ತಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರಕ್ಕಾಗಿ ರಾಜೀವ್ ಗಾಂಧಿಯವರು ಗ್ರಾಮ ಸರ್ಕಾರಗಳಿಗೆ ಜೀವ ತುಂಬುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಈ ನಿಟ್ಟಿನಲ್ಲಿ ಗ್ರಾಮ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ನಮ್ಮ ಸರ್ಕಾರವು ಕೂಡ ರಮೇಶ್ ಕುಮಾರ್ ವರದಿಯನ್ನು ಜಾರಿಗೆ ತಂದು ಪಂಚಾಯಿತಿಯ ಅಧ್ಯಕ್ಷರ ಅವಧಿಯನ್ನು ಹೆಚ್ಚಿಸಲಾಗಿದೆ. ಅಂದರೆ ಜನರಿಗೆ ಅಧಿಕಾರ ಹೆಚ್ಚಿಸಿದೆ ಎಂದರ್ಥ. ಕೇಂದ್ರ ಸರ್ಕಾರ ಕೂಡ ಗ್ರಾಮೋದಯದಿಂದ ಭಾರತದ ಉದಯ ಎಂಬ ಕಲ್ಪನೆಯ ಮೂಲಕ ಗ್ರಾಮೀಣ ಜನರಿಗೆ ಒತ್ತು ನೀಡುತ್ತಿದೆ. ರಾಜ್ಯ ಸರ್ಕಾರವು ಕೂಡ ಗ್ರಾಮಗಳನ್ನು ತ್ಯಾಜ್ಯಮುಕ್ತ, ಶೋಷಣೆಮುಕ್ತ, ವ್ಯಸನಮಕ್ತ, ಋಣ, ಬಹಿರ್ದೆಸೆಮುಕ್ತ ಗ್ರಾಮಗಳನ್ನಾಗಿಸಲು ಪಣತೊಟ್ಟಿದೆ. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಲಾಗಿದೆ. ಇದರ ಉದ್ದೇಶ ದೇಶದ ಪ್ರಧಾನಿಯವರು ಕುಡಿಯುವ ಗುಣಮಟ್ಟದ ನೀರು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆಂಬುದು. ಆದ್ದರಿಂದಲೇ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಬಯಲು ಶೌಚಮುಕ್ತ ಮಾಡಲು ಮೂರು ವರ್ಷದಲ್ಲಿ ಮೊದಲಿಗೆ 6 ಲಕ್ಷ, ನಂತರ 8 ಲಕ್ಷ, ಈ ವರ್ಷ 8 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ 12 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಅಸ್ಪೃಶ್ಯಮುಕ್ತ ಗ್ರಾಮ, ವ್ಯಸನಮುಕ್ತ, ಸಾಲಮುಕ್ತ ಗ್ರಾಮಗಳನ್ನು ಮಾಡುವ ಮೂಲಕ ಸುಂದರ ಗ್ರಾಮಗಳನ್ನು ನಿರ್ಮಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಬೇಕಾಗಿತ್ತು. ಆದರೆ ಅವರ ಹೆಲಿಕಾಫ್ಟರ್‌ನ ತಾಂತ್ರಿಕ ತೊಂದರೆಯಿಂದ ಅವರು ಬರಲು ಸಾಧ್ಯವಾಗಿಲ್ಲ. ಆದರೆ ಅವರು ಕೂಡ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಭಿಕಾ ದೇವಿ ಮಾತನಾಡಿದರು. ಸಭೆಯಲ್ಲಿ ಇಲಾಖೆಯ ನಿರ್ದೇಶಕರಾದ ಗೋಪಾಲಗೌಡ್ರು, ಶಿವಶಂಕರ್ ಇದ್ದರು.
ಸಚಿವರ ಪಾಠ
ದಾವಣಗೆರೆಯಲ್ಲಿಂದು ಪಂಚಾಯತ್ ರಾಜ್ ಇಲಾಖೆಯ ಸಚಿವ ಹೆಚ್.ಕೆ.ಪಾಟೀಲ್ ಅವರು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ರಾಜ್ಯದ 1 ಲಕ್ಷ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಒಂದು ಗ್ರಾಮವನ್ನು ಸುಂದರವಾಗಿಸಲು ಸಾಧ್ಯ ಎಂದು ಗಾಂಧೀಜಿ ಹೇಳುತ್ತಿದ್ದರು ಅದು ಸತ್ಯ. ಈ ಒಂದು ಸಂವಾದದಲ್ಲಿ ಗ್ರಾ.ಪಂ, ತಾ.ಪಂ, ಜಿ.ಪಂ ಸದಸ್ಯರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸಿರುವುದು ಸಂತೋಷಕರ ವಿಷಯ. ಆದರೆ ನಮ್ಮ ಗ್ರಾಮಗಳು ಶತಮಾನಗಳಿಂದಲೂ ಸರಿಪಡಿಸದ ಸಮಸ್ಯೆಗಳಿಂದ ಬಳಲುತ್ತಿವೆ. ಆದರೆ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಆ ಗ್ರಾಮದ ಸದಸ್ಯರಿಗೆ ಇದೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಇಡೀ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಬಲ್ಲಳು. ದೇಶದ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳಿಂದ ಸಾಧ್ಯವಾಗದ ಕೆಲಸವನ್ನು ನಿಮ್ಮ ಗ್ರಾಮದಲ್ಲಿ ನೀವೇ ಮಾಡಬಹುದು. ಅಂತಹ ಶಕ್ತಿ ಜನಪ್ರತಿನಿಗಳಿಗಿದೆ ಎಂದು ನೀತಿಪಾಠದೊಂದಿಗೆ ಉದಾಹರಣೆಗಳ ಮೂಲಕ ವಿವರಿಸಿದರು.
ರೈತರ ಆತ್ಮಹತ್ಯೆ ತಡೆಯಬಹುದು
ರಾಜ್ಯದಲ್ಲಿ ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಅದಕ್ಕೆ ಕಾರಣ ಹಾಗೂ ಸಮಸ್ಯೆಗಳನ್ನು ಹುಡುಕುತ್ತಾ ಹೋದರೆ ಸಮಯವಾಗುತ್ತದೆ. ಆದರೆ ಅದೇ ಗ್ರಾಮದ ಜನಪ್ರತಿನಿಧಿಗಳು, ಜನರು ಮನಸ್ಸು ಮಾಡಿದರೆ, ರೈತರ ಸಮಸ್ಯೆಗಳನ್ನು ತಡೆಯಬಹುದು. ಏಕೆಂದರೆ ಸಾಲದ ಬಾಧೆಯಿಂದ ಆತ್ಮಸ್ಥೈರ್ಯ ಕಳೆದುಕೊಳ್ಳುವ ರೈತನ ಸ್ಥಿತಿ ತಕ್ಷಣಕ್ಕೆ ಸ್ಥಳೀಯರಿಗೆ ಗೊತ್ತಾಗುತ್ತದೆ. ಆದರೆ ಆತ್ಮಹತ್ಯೆ ನಡೆದ ನಂತರ ಬರುವ ಅಧಿಕಾರಿಗಳು ಹಾಗೂ ಸಚಿವರುಗಳಿಂದ ಆತ್ಮಹತ್ಯೆ ತಡೆಯಲು ಸಾಧ್ಯವಿಲ್ಲ. ನಿಮ್ಮಿಂದ ಮಾತ್ರ ರೈತರ ಆತ್ಮಹತ್ಯೆ ತಡೆಯಲು ಸಾಧ್ಯ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನೀವೇ ಮುಂದಾಗಬೇಕು. ಸ್ವಾವಲಂಬಿ ಗ್ರಾಮಗಳನ್ನು ನಿರ್ಮಾಣ ಮಾಡಬೇಕು. ಅದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಸಚಿವರು ಒತ್ತಿ ಹೇಳಿದರು.

Write A Comment