ಕರ್ನಾಟಕ

ಪಿಎಫ್: ರಾಜಧಾನಿ ಬೆಂಗಳೂರು ಹಿಂಸಾ ರೂಪ ! ನಾಲ್ಕು ಬಸ್‌ಗಳಿಗೆ ಬೆಂಕಿ – ಕಾರ್ಮಿಕರ ಚದುರಿಸಲು ಗಾಳಿಯಲ್ಲಿ ಗುಂಡು – ಇಬ್ಬರಿಗೆ ಗುಂಡೇಟು

Pinterest LinkedIn Tumblr

bengaluru-bus-burnt

ಬೆಂಗಳೂರು: ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಸಿದ್ಧ ಉಡುಪು ಕಾರ್ಖಾನೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ನಗರದ ಎಲ್ಲ ದಿಕ್ಕುಗಳಿಗೂ ವ್ಯಾಪಿಸಿ, ಮತ್ತಷ್ಟು ಹಿಂಸಾ ರೂಪಕ್ಕೆ ತಿರುಗಿತು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡುಗಳು, ವಿದ್ಯಾರ್ಥಿನಿ ಸೇರಿ ಇಬ್ಬರ ದೇಹಗಳನ್ನು ಹೊಕ್ಕವು. ಗುಂಡೇಟಿನಿಂದ ಗಾಯಗೊಂಡಿರುವ ಬಿ.ಕಾಂ ವಿದ್ಯಾರ್ಥಿನಿ ಪ್ರೀತಿ (19) ಹಾಗೂ ಕೊರಿಯರ್ ಕಂಪೆನಿ ವ್ಯವಸ್ಥಾಪಕ ಮಂಜುನಾಥಪ್ಪ (44), ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

aa

aaa

banga

ಕಲ್ಲು ತೂರಾಟ ಹಾಗೂ ಲಾಠಿ ಪ್ರಹಾರದಿಂದಾಗಿ 12 ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬನ್ನೇರುಘಟ್ಟ ರಸ್ತೆಯ ಅರಕೆರೆ, ಹುಳಿಮಾವು, ಮೈಕೊಲೇಔಟ್, ಹೊಸೂರು ರಸ್ತೆಯ ಸಿಂಗಸಂದ್ರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ಬೊಮ್ಮಸಂದ್ರ ಅತ್ತಿಬೆಲೆ ಜಂಕ್ಷನ್‌, ತುಮಕೂರು ರಸ್ತೆಯಲ್ಲಿ ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ಪೀಣ್ಯ, ನೆಲಮಂಗಲ, ಮೈಸೂರು ರಸ್ತೆಯಲ್ಲಿ ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಮಿಕರು ಏಕಕಾಲಕ್ಕೆ ಪ್ರತಿಭಟನೆ ಆರಂಭಿಸಿದರು. ಈ ಪ್ರದೇಶಗಳಲ್ಲಿ ಮೊದಲು ರಸ್ತೆ ತಡೆ ಮೂಲಕ ಆರಂಭವಾದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸಿದರು.

ಠಾಣೆಗೆ ನುಗ್ಗಿ ದಾಂದಲೆ: ಇನ್ನು ಹೊಸೂರು ರಸ್ತೆಯಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಸಿಂಗಸಂದ್ರದ ಪಿಎಫ್ ಭವನಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಪ್ರತಿಭಟನಾಕಾರರು, ಪೊಲೀಸರ ಜತೆ ಕೈ–ಕೈ ಮಿಲಾಯಿಸಿದರು. ಅಲ್ಲಿಂದ ಸಿಂಗಸಂದ್ರ ಮುಖ್ಯರಸ್ತೆಗೆ ಬಂದ ಉದ್ರಿಕ್ತರು, ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಿದರು. ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮತ್ತೆ ಲಾಠಿ ಪ್ರಹಾರ ಮಾಡಿದರು.

ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಉದ್ರಿಕ್ತರ ಗುಂಪು ಹೆಬ್ಬಗೋಡಿ ಠಾಣೆ ಮೇಲೆ ಕಲ್ಲು ತೂರಿದರು. ಒಳಕ್ಕೆ ನುಗ್ಗಿ ಠಾಣೆಯಲ್ಲಿ ದಾಂದಲೆ ನಡೆಸಿದರು. ಈ ಪೈಕಿ ಕೆಲವರು ಠಾಣೆಯ ಹೊರಭಾಗ ನಿಲ್ಲಿಸಿದ್ದ 35ಕ್ಕೂ ಹೆಚ್ಚು ಜಪ್ತಿ ವಾಹನಗಳಿಗೆ ಬೆಂಕಿ ಹಚ್ಚಿದರು. ಅಲ್ಲದೆ, ನಾಲ್ಕು ಪೊಲೀಸ್ ವಾಹನ ಸೇರಿದಂತೆ 8 ವಾಹನಗಳ ಗಾಜು ಪುಡಿಗೊಳಿಸಿದರು. ಈ ವೇಳೆ ಸಿಬ್ಬಂದಿ ಠಾಣೆಗೆ ನುಗ್ಗಿದವರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸತೊಡಗಿದರು.

bengaluru-bus-

bengaluru-bus-burnt1

ss

ಆಗ ಎಲ್ಲರೂ ಸ್ಥಳದಿಂದ ಕಾಲ್ಕಿತ್ತರು. ಬೊಮ್ಮಸಂದ್ರದ ಬಯೋಕಾನ್‌ ಕಂಪೆನಿಗೆ ನುಗ್ಗಿದ ಕೆಲವರು, ಕೆಲಸ ನಿಲ್ಲಿಸಿ ಹೋರಾಟಕ್ಕೆ ಬರುವಂತೆ ಆಗ್ರಹಿಸಿದರು. ಇದಕ್ಕೆ ಒಪ್ಪದಿದ್ದಾಗ ಗೇಟ್ ಮುರಿದು ಒಳ ನುಗ್ಗಿದರು. ಅಲ್ಲದೆ, ಬಯೋಕಾನ್ ಆವರಣದ ತುರ್ತು ನಿಯಂತ್ರಣ ಕೊಠಡಿಯನ್ನು ಧ್ವಂಸ ಮಾಡಿದರು.

ಬಸ್‌ಗಳಿಗೆ ಬೆಂಕಿ:‌ ಜಾಲಹಳ್ಳಿ ಕ್ರಾಸ್‌, ಗೊರಗುಂಟೆಪಾಳ್ಯದಲ್ಲಿ 2 ಬಿಎಂಟಿಸಿ ಹಾಗೂ 2 ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿದರು. ಅಗ್ನಿಶಾಮಕ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದಕಾರಣ, ಅವು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್‌ಗಳು ಸುಟ್ಟು ಹೋದವು.

ಇದೇ ವೇಳೆ ಮತ್ತೊಂದು ಗುಂಪು ಯಶವಂತಪುರ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾಯಿತು. ಪೊಲೀಸರು ಅವರನ್ನು ತಡೆದು, ಹೊಯ್ಸಳ ವಾಹನದಲ್ಲಿ ಕರೆದೊಯ್ದರು.

ಸಂಜೆ 4.30ಕ್ಕೆ ನೂರಕ್ಕೂ ಹೆಚ್ಚು ಪೊಲೀಸರು ಸಾಲಾಗಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದರು. ಆ ನಂತರ ಪ್ರತಿಭಟನಾಕಾರರ ಗುಂಪು ಚದುರಿ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.
*
ನಿರ್ಬಂಧ ನಿಯಮ ವಾಪಸ್‌
ಹೈದರಾಬಾದ್‌ (ಪಿಟಿಐ): ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿರುವ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಹಿಂದಕ್ಕೆ ಪಡೆಯುವುದರ ಮೇಲೆ ನಿರ್ಬಂಧ ಹೇರುವ ನಿಯಮಗಳನ್ನು ವಾಪಸ್‌ ಪಡೆದಿದೆ.

ಮೇ 1ರಿಂದ ಜಾರಿಯಾಗಬೇಕಿದ್ದ ನಿಯಮಗಳನ್ನು ಮೂರು ತಿಂಗಳ ಮಟ್ಟಿಗೆ ತಡೆ ಹಿಡಿದ ಕೆಲವೇ ತಾಸುಗಳಲ್ಲಿ ಅಧಿಸೂಚನೆಯನ್ನೇ ಹಿಂದಕ್ಕೆ ಪಡೆಯುವ ನಿರ್ಧಾರ ಮಾಡಲಾಗಿದೆ. ‘ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳ ಒತ್ತಾಯದಿಂದಾಗಿ ಹಣ ವಾಪಸ್‌ ಪಡೆಯು ವುದರ ಮೇಲೆ ನಿರ್ಬಂಧ ಹೇರಲು ನಿರ್ಧ ರಿಸಲಾಗಿತ್ತು. ಈಗ ಕಾರ್ಮಿಕ ಸಂಘ ಟನೆಗಳ ಒತ್ತಾಯ ದಿಂದಲೇ ಆ ನಿರ್ಬಂಧಗಳನ್ನು ಹಿಂದಕ್ಕೆ ಪಡೆ ಯಲಾಗಿದೆ ಎಂದು ವಿವರಿಸಿದ್ದಾರೆ.

ಅದಕ್ಕೂ ಮೊದಲು ನವದೆಹಲಿಯಲ್ಲಿ ಮಾತನಾಡಿದ್ದ ದತ್ತಾತ್ರೇಯ, ಭವಿಷ್ಯ ನಿಧಿಗೆ ಸಂಬಂಧಿಸಿ ಫೆಬ್ರುವರಿ 10ರಂದು ಹೊರಡಿಸಲಾಗಿರುವ ಅಧಿಸೂಚನೆಗೆ ಮೂರು ತಿಂಗಳ ಮಟ್ಟಿಗೆ ತಡೆ ನೀಡಲಾಗುವುದು ಎಂದು ತಿಳಿಸಿದ್ದರು.
*
‘ರಾಕ್ಷಸರಾದ ಪೊಲೀಸರು’
‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸದಾ ಸಿದ್ಧರಿರುತ್ತೇವೆ ಎನ್ನುವ ಪೊಲೀಸರು, ಎರಡು ದಿನಗಳಿಂದ ರಾಕ್ಷಸರಂತೆ ವರ್ತಿಸಿ ದ್ದಾರೆ. ಮಹಿ ಳೆಯರನ್ನೂ ಲೆಕ್ಕಿಸದೆ, ಲಾಠಿಯಿಂದ ಹೊಡೆದಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು’ ಎಂದು ಪೀಣ್ಯದ ರಾಜಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

Write A Comment