ಕರ್ನಾಟಕ

ಸಿದ್ದು 23ರಂದು ದೆಹಲಿಗೆ ದೌಡು

Pinterest LinkedIn Tumblr

sidduಬೆಂಗಳೂರು, ಏ. ೧೯ -ದುಬಾರಿ ವಾಚ್ ಪ್ರಕರಣ, ಎಸಿಬಿ ರಚನೆಯಿಂದ ಸ್ವಪಕ್ಷೀಯರಿಂದಲೇ ಟೀಕೆ ಹಾಗು ಪುತ್ರನ ಕಂಪನಿಗೆ ಟೆಂಡರ್ ನೀಡಿಕೆ ಪ್ರಕರಣಗಳಿಂದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ೨೩ ರಂದು ದೆಹಲಿಗೆ ತೆರಳಲಿದ್ದು ವಸ್ತು ಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.
ಇದೆಲ್ಲದರ ನಡುವೆ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಶಾಸಕರಿಂದ ಹೆಚ್ಚುತ್ತಿರುವ ಬೇಡಿಕೆಯ ಕುರಿತೂ ಹೈ ಕಮಾಂಡ್ ಜೊತೆ ಚರ್ಚೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ.
ವಿವಿಧ ಪ್ರಕರಣಗಳಿಂದಾಗಿ ಅಧಿಕಾರ ಕಳೆದು ಕೊಳ್ಳುವ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತಂಕಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಹಾಗು ಗೃಹ ಸಚಿವ ಡಾ. ಜಿ ಪರಮೇಶ್ವರ್ ದಲಿತ ಮುಖ್ಯಮಂತ್ರಿಯ ಸೊಲ್ಲೆತ್ತಿರುವುದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಮೊನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ,ಪರಮೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ನಡವಳಿಕೆ ಬಗ್ಗೆ ವರದಿ ಪಡೆದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸಿದ್ದರಾಯಮ್ಮ ಅವರ ನಡೆ ಕುರಿತು ಅಸಮಾಧಾನ ಹೊರಹಾಕಿದ್ದರು.
ಅಲ್ಲದೆ ಇತ್ತೀಚಿನ ವಿವಿದ ಪ್ರಕರಣಗಳ ಕುರಿತೂ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆಯಲು ನಿರ್ಧರಿಸಿದ್ದರು.ಅದಕ್ಕೆ ಪೂರಕ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವಿವರ ನೀಡಲಿದ್ದಾರೆ.
೨೩ ರಂದು ದೆಹಲಿಗೆ:
೨೩ ರಂದು ರಾತ್ರಿ ದೆಹಲಿಗೆ ತೆರಳಲಿದ್ದು ೨೪ ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕರೆದಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಅದಾದ ಬಳಿಕ ಹೈಕಮಾಂಡ್ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಿನ ತಿಂಗಳು ಮೂರು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ.ಅಲ್ಲದೆ ಸಚಿವ ಸಂಪುಟ ವಿಸ್ತರಣೆಗಾಗಿ ಪಕ್ಷದ ಶಾಸಕರಿಂದ ಹೆಚ್ಚುತ್ತಿರುವ ಬೇಡಿಕೆಯ ಕುರಿತಂತೆಯೂ ಚರ್ಚೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ.
ಇತ್ತೀಚೆಗೆ ಪದೇ ಪದೇ ವಿವಾದಕ್ಕೆ ಸಿಲುಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ತೂಗುಕತ್ತಿ ನೇತಾಡುತ್ತಿದ್ದು ಪಂಚ ರಾಜ್ಯಗಳ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರನ್ನು ಬದಲಿಸಿ ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಕ ಮಾಡಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

Write A Comment