ಕರ್ನಾಟಕ

ಬೆಂಗಳೂರು: ಕೇಂದ್ರ ಸರ್ಕಾರದ ಪಿಎಫ್ ನೀತಿಯನ್ನು ವಿರೋಧಿಸಿ ತೀವ್ರಗೊಂಡ ಪ್ರತಿಭಟನೆ, ಕಲ್ಲು ತೂರಾಟ, ಹೆಬ್ಬಗೋಡಿ ಬಳಿ ಪೊಲೀಸರಿಂದ ಅಶ್ರುವಾಯು ಪ್ರಯೋಗ; ಪ್ರತಿಭಟನಾಕಾರರು- ಪೊಲೀಸರ ನಡುವೆ ಮಾರಾಮಾರಿ

Pinterest LinkedIn Tumblr

2

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಭವಿಷ್ಯ ನಿಧಿ(ಪಿಎಫ್) ನೀತಿಯನ್ನು ಖಂಡಿಸಿ ಸಾವಿರಾರು ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಘರ್ಷಣೆಗೆ ತಿರುಗಿದೆ.

ಬನ್ನೆರುಘಟ್ಟ ರಸ್ತೆಯ ಗೊಟ್ಟಿಗೆರೆ ಸಮೀಪ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದ್ದಾರೆ.

1

ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಕಾರ್ಮಿಕರಿಂದ ಯಾವುದೇ ಅನಾಹುತ ನಡೆಯಬಾರದು ಮತ್ತು ಸಾರ್ಜವನಿಕರ ಆಸ್ತಿ ಪಾಸ್ತಿಗೆ ಹಾನಿಯಾಗಬಾರದು ಎಂದು ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ.

ಈ ವೇಳೆ ವ್ಯಕ್ತಿಯ ತಲೆಗೆ ಗಾಯವಾಗಿದೆ. ತುಮಕೂರು ರಸ್ತೆ ಗೊರಗುಂಟೆಪಾಳ್ಯ ಸಿಗ್ನಲ್ ನಲ್ಲಿ ಘರ್ಷಣೆಯಾಗುತ್ತಿದ್ದು, ಸಿಕ್ಕ ಸಿಕ್ಕ ವಾಹನಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪೊಲೀಸರ ಮೇಲೂ ಕಲ್ಲೂ ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ 50ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.

ಗೊರಗುಂಟೆಪಾಳ್ಯ ಸುತ್ತಮುತ್ತ ಅಂಗಡಿ, ಮುಂಗಟ್ಟು ಬಂದ್ ಮಾಡಲಾಗಿದೆ. ಬೆಂಗಳೂರಿನ ಹಲವಾರು ಭಾಗಗಳಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಹೊಸೂರು ರಸ್ತೆಯಲ್ಲಿರುವ ಹೆಬ್ಬಗೋಡಿ ಬಳಿ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಇನ್ನು ಉದ್ರಿಕ್ತರು ನಾಲ್ಕೈದು ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬಸ್ ಕಿಟಕಿ ಗಾಜುಗಳು ಹೊಡೆದು ಹೋಗಿವೆ.

ಇನ್ನು ಬೆಂಗಳೂರಿನ ಗೂಡ್ ಶೆಡ್ ರಸ್ತೆಯಲ್ಲಿ ಪೊಲೀಸರು ಮತ್ತು ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು ಸಿಸಿಬಿ ಕಚೇರಿ ಬಳಿ ಕಾರ್ಮಿಕರು ಜಮಾಯಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.

ಜಾಲಹಳ್ಳಿ ಕ್ರಾಸ್ ಬಳಿ ಮೂರು ಬಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. 2 ಕೆಎಸ್ ಆರ್ ಟಿಸಿ, 1 ಬಿಎಂಟಿಸಿ ಬಸ್ ಬೆಂಕಿಗಾಹುತಿಯಾಗಿದೆ. ಹೆಬ್ಬಗೋಡಿ ಪೊಲೀಸರು ಜಪ್ತಿ ಮಾಡಲಾಗಿದ್ದ ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಜಪ್ತಿ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿದೆ.

Write A Comment