ಅಂತರಾಷ್ಟ್ರೀಯ

ಇರಾನ್ ಉಡುಪು ಧರಿಸಿದ್ದ ಸುಷ್ಮಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆ!

Pinterest LinkedIn Tumblr

sushma

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಇರಾನ್‌ ಭೇಟಿ ವೇಳೆ ಧರಿಸಿದ್ದ ಉಡುಪು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸುಷ್ಮಾ ಸ್ವರಾಜ್ ಅವರು ಭಾನುವಾರ ಟೆಹರಾನ್‌ನಲ್ಲಿ ಪಾಲ್ಗೊಂಡ ಎಲ್ಲ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಮೈ ಮುಚ್ಚುವಂತಹ ಉಡುಗೆ ಧರಿಸಿದ್ದರು. ಈರುಳ್ಳಿ ಬಣ್ಣದ (ನಸು ಪಿಂಕ್ ) ಸೀರೆಯುಟ್ಟಿದ್ದ ಅವರು ಅದೇ ಬಣ್ಣದ ಶಾಲು ಹೊದ್ದುಕೊಂಡು ಆ ಶಾಲು ಬಳಸಿ ತಲೆಯನ್ನು ಪೂರ್ಣವಾಗಿ ಮುಚ್ಚಿಕೊಂಡಿದ್ದರು. ಅಂದರೆ ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್‌ ರೀತಿಯಲ್ಲಿ ತಲೆಯನ್ನು ಮುಚ್ಚಿಕೊಂಡಿದ್ದರು.

ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಮತ್ತು ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್‌ ಜರೀಫ್‌ ಅವರ ಭೇಟಿಯ ಸಂದರ್ಭದಲ್ಲೂ ಸುಷ್ಮಾ ಮುಸ್ಲಿಂ ಮಹಿಳೆಯರಂತೆ ಉಡುಪು ಧರಿಸಿದ್ದರು. ಆದಾಗ್ಯೂ ಸುಷ್ಮಾ ಅವರು ಈ ರೀತಿ ಉಡುಪು ಧರಿಸಿದ್ದಕ್ಕೆ ನೆಟಿಜನ್ ಗಳು ಸಾಮಾಜಿಕ ತಾಣದಲ್ಲಿ ಟೀಕೆ ವ್ಯಕ್ತ ಪಡಿಸಿದ್ದಾರೆ. ಟ್ವಿಟರ್ನಲ್ಲಿ ಸುಷ್ಮಾ ಅವರ ಉಡುಪು ಹೆಚ್ಚಿನ ಚರ್ಚೆಗೆ ಗ್ರಾಸವಾಗಿತ್ತು. ಸುಷ್ಮಾ ಸ್ವರಾಜ್ ಅವರು ಹಿಜಾಬ್ ಧರಿಸಿದ್ದ ಆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಟ್ವಿಟರ್ ನಲ್ಲಿ ಕೆನಡಾದ ಸಾಹಿತಿ ತಾರೆಕ್‌ ಫತಾಹ್‌ ಅವರು ಸುಷ್ಮಾ ಅವರೇ ಇದು ಮುಜುಗರದ ವಿಷಯ. ಪ್ರತ್ಯೇಕ ಶಾಲು ಹೊದ್ದುಕೊಳ್ಳುವ ಅವಶ್ಯಕತೆಯಿರಲಿಲ್ಲ. ಸೀರೆಯ ಸೆರಗನ್ನೇ ತಲೆ ಮೇಲೆ ಹಾಕಿಕೊಳ್ಳಬಹುದಿತ್ತು ಎಂದು ಟ್ವೀಟ್ ಮಾಡಿದ್ದರು.

ಬಿಜು ಕೃಷ್ಣನ್ ಎಂಬವರು ರೌಹಾನಿ ಭಾರತಕ್ಕೆ ಬಂದರೆ ಅವರಲ್ಲಿ ಧೋತಿ, ಕುರ್ತಾ ಧರಿಸಲು ಹೇಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ನೆಟಿಜನ್ಗಳು ಸುಷ್ಮಾ ವಸ್ತ್ರದ ಬಗ್ಗೆ ಟೀಕೆ ಮಾಡಿದರೆ ಇನ್ನು ಕೆಲವರು ನಗೆಯಾಡಿದ್ದಾರೆ. ಸುಷ್ಮಾ ಅವರು ಶಿಯಾ ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂಬು ಟ್ರೋಲ್ ಗಳೂ ಟ್ವಿಟರ್ನಲ್ಲಿ ಹರಿದಾಡಿವೆ.

ಜೂಲಿ ಬಿಷೆಪ್ ಕೂಡಾ ಹಿಜಾಬ್ ಧರಿಸಿದ್ದರು!
2013 ರಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಜೂಲಿ ಬಿಷೆಪ್ ಅವರು ಇರಾನ್ಗೆ ಭೇಟಿ ನೀಡಿದಾಗ ಹಿಜಾಬ್ ಧರಿಸಿದ್ದು, ಟೀಕೆಗೊಳಗಾಗಿತ್ತು. ಇದಕ್ಕೆ ಉತ್ತರಿಸಿದ ಜೂಲಿ ಅವರು 12 ವರುಷಗಳಲ್ಲಿ ಇದೇ ಮೊದಲ ಬಾರಿಗೆ ನಾವು ಇರಾನ್ ಗೆ ಭೇಟಿ ನೀಡಿದ್ದೇವೆ. ಇದೇ ನಮ್ಮ ಕೊನೆಯ ಭೇಟಿ ಆಗಲು ನಾನು ಬಯಸುವುದಿಲ್ಲ ಎಂದು ಉತ್ತರಿಸಿದ್ದರು.

ಇರಾನ್ ನಲ್ಲಿ ಹಿಜಾಬ್ ಧರಿಸದೇ ಇದ್ದರೆ ಏನಾಗುತ್ತದೆ?
2014ರಲ್ಲಿ ಯುರೋಪಿಯನ್ ವಿದೇಶಾಂಗ ಸಚಿವೆ ಎಮ್ಮಾ ಬೊನಿನೋ ಹಿಜಾಬ್ ಧರಿಸದೆ ಟೆಹರಾನ್ ಗೆ ಭೇಟಿ ನೀಡಿದ್ದರು. ಅವರು ಇರಾನ್ ಭದ್ರತಾ ಮುಖ್ಯಸ್ಥರನ್ನು ಭೇಟಿಯಾದ ವೇಳೆ ಎಮ್ಮಾ ಅವರಿಗೆ ಮೂರು ಶಿರವಸ್ತ್ರವನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಆ ಶಿರವಸ್ತ್ರವನ್ನು ಧರಿಸಲು ಎಮ್ಮಾ ನಿರಾಕರಿಸಿದ್ದರು. ಏತನ್ಮಧ್ಯೆ, ಹಿಜಾಬ್ ಧರಿಸದೇ ಇದ್ದರೆ ಇರಾನ್ ಪ್ರತಿನಿಧಿಗಳ ಭೇಟಿ ಸಾಧ್ಯವಿಲ್ಲ, ನಿಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ನಂಚರ ಎಮ್ಮಾ ಶಿರವಸ್ತ್ರ ಧರಿಸಲು ಒಪ್ಪಿದರು ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು.

Write A Comment