ಕರ್ನಾಟಕ

ಪಿಯು ಮಾತ್ರವಲ್ಲ ಎಸ್ಸೆಸ್ಸೆಲ್ಸಿ ಮೌಲ್ಯಮಾಪನವೂ ಇಲ್ಲ

Pinterest LinkedIn Tumblr

767674ಬೆಂಗಳೂರು: ದ್ವಿತೀಯ ಪಿಯು ಮೌಲ್ಯಮಾಪನ ಬಿಕ್ಕಟ್ಟು ಕಗ್ಗಂಟಾಗಿರುವಾಗಲೇ, ಈಗ ಪ್ರೌಢಶಾಲೆಗಳ ಶಿಕ್ಷಕರು ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.
ಇದರ ನಡುವೆಯೇ, ಪದವಿ ಕಾಲೇಜುಗಳ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿಯಿಂದ ಪದವಿ ವರೆಗಿನ ಎಲ್ಲ ಪರೀಕ್ಷೆಗಳ ಮೌಲ್ಯಮಾಪನ ಅನಿಶ್ಚಿತವಾಗಿವೆ.
ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘಗಳು ತಿಳಿಸಿವೆ.
ಹುಬ್ಬಳ್ಳಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಂಟ, ‘ಉತ್ತರ ಕರ್ನಾಟಕದ ಒಂಬತ್ತು ಶೈಕ್ಷಣಿಕ ಜಿಲ್ಲೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಭಾನುವಾರದಿಂದಲೇ ಮುಖ್ಯಸ್ಥರು, ಉಪ ಮುಖ್ಯಸ್ಥರು ಹಾಗೂ  ಮೌಲ್ಯಮಾಪಕರು ಉತ್ತರಪತ್ರಿಕೆಗಳ ಬಂಡಲ್‌ಗಳನ್ನು ಬಿಚ್ಚದೇ ಲೇಖನಿ ಸ್ಥಗಿತ ಹೋರಾಟ ಆರಂಭಿಸುವರು’ ಎಂದು ಹೇಳಿದರು.
‘ಕುಮಾರ ನಾಯಕ್‌ ವರದಿಯಲ್ಲಿ ವೇತನ ತಾರತಮ್ಯ ನಿವಾರಣೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸದೇ ಕಣ್ಣೊರೆಸುವ ಮತ್ತು ಒಡೆದು ಆಳುವ ತಂತ್ರಗಳನ್ನು ಅನುಸರಿಸಿತು’ ಎಂದು ಅವರು ಆರೋಪಿಸಿದರು.
‘ಮೌಲ್ಯಮಾಪನ ಬಹಿಷ್ಕಾರ ಹಿಂಪಡೆಯುವುದಾಗಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ. ಮಂಜುನಾಥ ಕೈಗೊಂಡ ತೀರ್ಮಾನ ಖಂಡನೀಯ. ಪಿಯು ಉಪನ್ಯಾಸಕ ಮೌಲ್ಯಮಾಪನ ಬಹಿಷ್ಕಾರಕ್ಕೆ ಸಂಘದ ಸಂಪೂರ್ಣ ಬೆಂಬಲ ಇದೆ’ ಎಂದು ತಿಳಿಸಿದರು.
ಇತ್ತ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಸಿ. ಗೋಪಿನಾಥ್‌, ‘ಎಸ್ಸೆಸ್ಸೆಲ್ಸಿ ಮೌಲ್ಯಮಾಪನದಲ್ಲಿ ಭಾಗವಹಿಸುವುದಿಲ್ಲ’ ಎಂದರು.
‘16 ವರ್ಷಗಳಿಂದ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಈ ಬಾರಿ ಬೇಡಿಕೆ ಈಡೇರಿಸುವವರೆಗೂ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.
ನಾಳೆಯಿಂದ ಶುರು: ರಾಮೇಗೌಡ
‘ದ್ವಿತೀಯ ಪಿಯು ಮೌಲ್ಯಮಾಪನ ಸೋಮವಾರದಿಂದ ಶುರುವಾಗುತ್ತದೆ. ರಾಜ್ಯದ ಎಲ್ಲ 46 ಕೇಂದ್ರಗಳಲ್ಲಿ ಕೋಡಿಂಗ್‌ ಕಾರ್ಯ ಶನಿವಾರ ಆರಂಭವಾಗಿದೆ’ ಎಂದು ಮಂಡಳಿ ನಿರ್ದೇಶಕ ಡಾ.ರಾಮೇಗೌಡ ತಿಳಿಸಿದರು.
ಕೋಡಿಂಗ್‌ ಮಾಡುವುದಕ್ಕಾಗಿ ಪ್ರತೀ ಮೌಲ್ಯಮಾಪನ ಕೇಂದ್ರಕ್ಕೆ 10 ಜನರ ತಂಡ ರಚಿಸಲಾಗಿದೆ. ಇದರಲ್ಲಿ ಪಿಯು ಇಲಾಖೆ ಅಧಿಕಾರಿಗಳು, ಪ್ರೌಢ ಶಿಕ್ಷಣ ಇಲಾಖೆ ಹಿರಿಯ ಸಿಬ್ಬಂದಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಿಬ್ಬಂದಿ ಇದ್ದಾರೆ. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಕೋಡಿಂಗ್ ಪೂರ್ಣಗೊಂಡಿದೆ’ ಎಂದರು.
ಆದರೆ ಮಂಗಳೂರು ಕೇಂದ್ರದ ಮುಖ್ಯಸ್ಥರು ತಮ್ಮನ್ನು ಈ ಕಾರ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಕೋರಿದ್ದಾರೆ ಎನ್ನಲಾಗಿದೆ. ‘ಮೌಲ್ಯಮಾಪನಕ್ಕೆ 20 ಸಾವಿರ ಉಪನ್ಯಾಸಕರು ಬೇಕು. ಆದರೀಗ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ 7 ಸಾವಿರ ಉಪನ್ಯಾಸಕರು ಲಭ್ಯರಿದ್ದಾರೆ.
ಸೋಮವಾರ ಅವರೆಲ್ಲ ನಿಯೋಜಿತ ಕೇಂದ್ರಗಳಿಗೆ ಬಂದು ಮೌಲ್ಯಮಾಪನ ಆರಂಭಿಸುತ್ತಾರೆ. ಮುಷ್ಕರನಿರತ ಉಪನ್ಯಾಸಕರೂ ಪ್ರತಿಭಟನೆ ಕೊನೆಗೊಳಿಸಿ ಮೌಲ್ಯಮಾಪನಕ್ಕೆ ಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಗರಣದ ಕಾಲೇಜು ಉಪನ್ಯಾಸಕರಿಂದ ಮೌಲ್ಯಮಾಪನ
ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿ ಸಿಐಡಿ ತನಿಖೆ ಎದುರಿಸುತ್ತಿರುವ 11 ಕಾಲೇಜುಗಳ ಉಪನ್ಯಾಸಕರಿಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವಂತೆ ಪತ್ರ ಕಳುಹಿಸಿದೆ.
ವಿದ್ಯಾರಣ್ಯಪುರದ ನಾರಾಯಣ ಹಾಗೂ ಚೈತನ್ಯ ಪದವಿ ಪೂರ್ವ ಕಾಲೇಜುಗಳು, ಯಲಹಂಕದ ದೀಕ್ಷಾ, ಕೆಂಪಾಪುರದ ಪ್ರೆಸಿಡೆನ್ಸಿ, ಸಂಜಯನಗರದ ಬೃಂದಾವನ, ಕಲ್ಯಾಣ ನಗರದ ರಾಯಲ್‌ ಕನ್‌ಕರ್ಡ್‌, ಮಂಗಳೂರಿನ ಎಕ್ಸ್‌ಪರ್ಟ್‌ ಮತ್ತು ಮಹೇಶ್‌ ಕಾಲೇಜುಗಳು, ಬಳ್ಳಾರಿಯ ನಾರಾಯಣ ಮತ್ತು ಚೈತನ್ಯ ಕಾಲೇಜುಗಳು ಹಾಗೂ ತುಮಕೂರಿನ ದೀಕ್ಷಾ ಕಾಲೇಜಿನ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರ ಕಳುಹಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಈ ಕಾಲೇಜುಗಳ ಮೇಲೆ ದಾಳಿ ಮಾಡಿ ಪ್ರಾಂಶುಪಾಲರು, ಉಪನ್ಯಾಸಕರು ಕಚೇರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವು ಕಾಲೇಜುಗಳ ಸಿಸಿಟಿವಿ ಕ್ಯಾಮೆರಾಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮುಂದುವರಿದ ಪ್ರತಿಭಟನೆ: ಈ ಮಧ್ಯೆ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮುಂದುವರಿಸಿವೆ. ಸಾಹಿತಿಗಳಾದ ಡಾ.ನಲ್ಲೂರು ಪ್ರಸಾದ್‌, ಎಚ್‌.ಎಲ್‌. ಪುಷ್ಪಾ, ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್‌.ಎಲ್‌. ಮುಕುಂದರಾಜ್‌ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.
‘ಕೋಡಿಂಗ್‌ ಕಾರ್ಯ ಮಾಡಬೇಕು ಎಂದರೆ 6 ಸಾವಿರ ಉಪನ್ಯಾಸಕರು ಎರಡು ದಿನ ಕಾರ್ಯ ನಿರ್ವಹಿಸಬೇಕು. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಇದುವರೆಗೂ ಇಂತಹ ಕಾರ್ಯವನ್ನೇ ಮಾಡದ ಅನನುಭವಿ 300–400 ಸಿಬ್ಬಂದಿಯಿಂದ ಕೋಡಿಂಗ್‌ ಮಾಡಿಸಲು ಮುಂದಾಗಿದೆ. ಇದು ಎಂದಿಗೂ ಸಾಧ್ಯವಿಲ್ಲ’ ಎಂದು ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.
‘ಪ್ರತಿಭಟನೆ ಮುಂದುವರಿಸುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

Write A Comment