ಕರ್ನಾಟಕ

ತ್ಯಾಜ್ಯ ನಾಶ ಘಟಕದಲ್ಲಿ ಬೆಂಕಿ

Pinterest LinkedIn Tumblr

pvec16April16rmg fireಬೆಂಗಳೂರು: ಕುಂಬಳಗೋಡು ಕೆಐಎಡಿಬಿ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿರುವ ಗೋಮ್ಥಿ ಕೈಗಾರಿಕಾ ತ್ಯಾಜ್ಯ ನಾಶ ಘಟಕದಲ್ಲಿ ಶುಕ್ರವಾರ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.
‘ಘಟಕದ ಯಂತ್ರವೊಂದರಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ವಿದ್ಯುತ್‌ ಶಾರ್ಟ್‌್ ಸರ್ಕಿಟ್‌ ಆಗಿತ್ತು. ಪರಿಣಾಮ ಬೆಂಕಿ ಕಾಣಿಸಿಕೊಂಡು ಇಡೀ ಘಟಕವೇ ಬೆಂಕಿಗೆ ಆಹುತಿಯಾಗಿದೆ. ಹಾನಿ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ’ ಎಂದು ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರ್ಮಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಘಟಕದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ತ್ಯಾಜ್ಯ ನಾಶಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬೆಂಕಿ ಕಾಣಿಸಿಕೊಂಡಿದ್ದರಿಂದ ಅವರೆಲ್ಲ ಅದನ್ನು ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿಬಂದರು. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ದಳದ ವಾಹನಗಳು ಬರುವುದು ತಡವಾಗಿದ್ದರಿಂದ ಖಾಸಗಿ ಕಂಪೆನಿ ನೀರಿನ ವಾಹನಗಳನ್ನು ಬೆಂಕಿ ನಂದಿಸಲು ಬಳಸಿಕೊಳ್ಳಲಾಯಿತು. ಅಷ್ಟಾದರೂ ಬೆಂಕಿ ಹತೋಟಿಗೆ ಬರಲಿಲ್ಲ.
ಒಂದೂವರೆ ಗಂಟೆ ನಂತರ ಸ್ಥಳಕ್ಕೆ ಬಂದ ರಾಮನಗರ ಅಗ್ನಿಶಾಮಕ ದಳದ ಸಿಬ್ಬಂದಿ 6 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
‘1 ಎಕರೆ ಪ್ರದೇಶದಲ್ಲಿ 10 ವರ್ಷದ ಹಿಂದೆ ಗೋಮ್ಥಿ ಘಟಕ ಸ್ಥಾಪಿಸಲಾಗಿದ್ದು, ಇದು ಕೈಗಾರಿಕಾ ತ್ಯಾಜ್ಯ ನಾಶಪಡಿಸುವ ರಾಜ್ಯದ ಮೊದಲ ಘಟಕ. ಪ್ರತಿ ದಿನವೂ 2 ಮೆಟ್ರಿಕ್‌ ಟನ್‌್ ತ್ಯಾಜ್ಯ ನಾಶಪಡಿಸಲಾಗುತ್ತದೆ. ನಿಯಮಾವಳಿಯಂತೆ ಅಗ್ನಿ ಅವಘಡಗಳಿಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ಕುಂಬಳ ಗೋಡು ಠಾಣೆಗೆ ದೂರು ನೀಡಲಾಗಿದೆ’ ಎಂದು ಶರ್ಮಾ ಅವರು ತಿಳಿಸಿದರು.
ಮೂರು ಕಾರುಗಳಿಗೆ ಬೆಂಕಿ: ಶುಕ್ರವಾರ ಒಂದೇ ದಿನ ಮೂರು ಕಾರುಗಳಿಗೆ ಬೆಂಕಿ ತಗುಲಿ ಭಾಗಶಃ ಕಾರುಗಳು ಸುಟ್ಟು ಹೋಗಿವೆ. ಮಹಾರಾಣಿ ಕಾಲೇಜ್‌್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಸೇಂಟ್‌ ಜಾನ್ಸ್‌ ರಸ್ತೆಯ ಫ್ರೆಂಜರ್‌್ ಟೌನ್‌ ಬಳಿ ನಿಲ್ಲಿಸಿದ್ದ ಕಾರು ಹಾಗೂ ವಸಂತನಗರದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನಲ್ಲೂ ಬೆಂಕಿ ಕಾಣಿಸಿಕೊಂಡಿತ್ತು.
ಸರ್ಜಾಪುರ ಪೊಲೀಸ್‌ ಠಾಣೆ ಬಳಿಯ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಲಕ್ಷಾಂತರ ರೂಪಾಯಿ ಮೌಲ್ಯದ  ವಸ್ತುಗಳು ಹಾಗೂ ಪೀಠೋಪಕರಣಗಳು  ಸುಟ್ಟಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು.

Write A Comment