ಬೆಂಗಳೂರು: ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಸಂಸ್ಥೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಗ್ನಾಸ್ಟಿಕ್ ಲ್ಯಾಬ್ (ರೋಗ ಪತ್ತೆ ಪ್ರಯೋಗಾಲಯ) ಸ್ಥಾಪಿಸಲು ಗುತ್ತಿಗೆ ನೀಡಿರುವ ಪ್ರಕ್ರಿಯೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ವೆಬ್ಸೈಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್ಎಸ್ವೈ) ಕಾರ್ಯನಿರ್ವಹಿಸುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಸಂಸ್ಥೆ ನಡುವಿನ ಒಪ್ಪಂದದ ಪ್ರತಿಯೂ ವೆಬ್ಸೈಟಿನಲ್ಲಿದೆ. ಅದರ ಜೊತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಾಗ ಎದುರಾದ ಸಮಸ್ಯೆಗಳನ್ನು ವಿವರಿಸಿ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ ಕಂಪೆನಿಯವರು ಆಸ್ಪತ್ರೆಗೆ ಪತ್ರ ಬರೆದಿದ್ದರು. ಇದರ ವಿವರಗಳೂ ವೆಬ್ಸೈಟ್ನಲ್ಲಿದೆ. ಈ ವಿವರಗಳು ಟೆಂಡರ್ ಪ್ರಕ್ರಿಯೆ ಬಗ್ಗೆ ಸಂದೇಹ ಮೂಡಿಸುವಂತಿವೆ.
‘ಇಲ್ಲಿ ಅನುಮಾನ ಮೂಡಿಸುವಂಥದ್ದೇನೋ ನಡೆದಿದೆ. ನಾವು ನಿಗದಿತ ಸಮಯಕ್ಕೆ ಮೊದಲೇ ಹಣ ಜಮೆ ಮಾಡಿದ್ದೆವು. ಹಣವು ಅಕ್ಟೋಬರ್ 26ರಂದು ಮಧ್ಯಾಹ್ನ 1 ಗಂಟೆಗೆ ಅವರ ಖಾತೆಗೆ ತಲುಪಿದೆ. ಆದರೆ ಐದು ದಿನಗಳ ನಂತರ ಅದು ನಮಗೆ ವಾಪಸ್ ಬಂತು’ ಎಂದು ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ ಕಂಪೆನಿ ಅಧಿಕಾರಿ ಜಿ. ಕೃಷ್ಣ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮಗೆ ಟೆಂಡರ್ ಕೈತಪ್ಪಲು ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ಪಿ.ಜಿ. ಗಿರೀಶ್ ಅವರೇ ಕಾರಣ’ ಎಂದು ಕುಮಾರ್ ಆರೋಪಿಸಿದರು.
‘ಟೆಂಡರ್ ಸಲ್ಲಿಸುವಾಗ ಎದುರಾದ ಸಮಸ್ಯೆಗಳನ್ನು ವಿವರಿಸಿ, ಗಡುವು ವಿಸ್ತರಿಸುವಂತೆ ನಾವು ಗಿರೀಶ್ ಅವರನ್ನು ಕೋರಿದೆವು. ಈ ವಿಚಾರಕ್ಕೆ ಸಂಬಂಧಿಸಿದ ಅಧಿಕಾರಿ ನಾನಲ್ಲ ಎಂದು ಅವರು ಹೇಳಿದರು. ನಾವು ಕಳುಹಿಸಿದ ಇ–ಮೇಲ್ಗಳಿಗೂ ಪ್ರತಿಕ್ರಿಯೆ ಬರಲಿಲ್ಲ. ಸ್ಪೀಡ್ಪೋಸ್ಟ್ ಮೂಲಕ ಪತ್ರ ಕಳುಹಿಸಿದರೂ ಅದಕ್ಕೂ ಉತ್ತರಿಸಲಿಲ್ಲ’ ಎಂದು ಕುಮಾರ್ ತಿಳಿಸಿದರು.
ಎಚ್ಎಲ್ಎಲ್ ಕಂಪೆನಿಯ ಆರೋಪವನ್ನು ಅಲ್ಲಗಳೆದ ಡಾ. ಗಿರೀಶ್, ‘ಅವರು ನಮಗೆ ಗಡುವಿನ ನಂತರ ಇ–ಮೇಲ್ ಕಳುಹಿಸಿದರು. ಗಡುವು ಮುಗಿದ ನಂತರ ನಮ್ಮಿಂದ ಏನು ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.
ಇದು ಇ–ಟೆಂಡರ್. ಇದರಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ ಎಂಬುದು ಟೆಂಡರ್ ತೆರೆಯುವವರೆಗೆ ಯಾರಿಗೂ ತಿಳಿಯುವುದಿಲ್ಲ ಎಂದು ಗಿರೀಶ್ ವಿವರಿಸಿದರು. ‘ಟೆಂಡರ್ನಲ್ಲಿ ಭಾಗವಹಿಸಲು ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಜತೆಗೆ ಸೀಮನ್ಸ್, ಫಿಲಿಪ್ಸ್, ಮೆಡಲ್ ಕ್ಲುಮ್ಯಾಕ್ಸ್, ಎಚ್ಎಲ್ಎಲ್ ಕಂಪೆನಿಗಳೂ ಆಸಕ್ತಿ ತೋರಿಸಿದ್ದವು. ಷರತ್ತುಗಳನ್ನು ನೋಡಿದ ಬಳಿಕ ಎಚ್ಎಲ್ಎಲ್ ಹಾಗೂ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಕಂಪೆನಿ ಹೊರತಾಗಿ ಉಳಿದ ಕಂಪೆನಿಗಳು ಹಿಂದಕ್ಕೆ ಸರಿದಿದ್ದವು. ಎಚ್ಎಲ್ಎಲ್ ಠೇವಣಿ (ಇಎಂಡಿ) ಮೊತ್ತವನ್ನು ಗಡುವಿ ನೊಳಗೆ ಪಾವತಿಸಲಿಲ್ಲ. ಅಂತಿಮವಾಗಿ ಗುತ್ತಿಗೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಪಾಲಾಯಿತು’ ಎಂದು ಗಿರೀಶ್ ಗುರುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಕರ್ನಾಟಕ