ಕರ್ನಾಟಕ

ಹಣ ಠೇವಣಿ ಇರಿಸಿದ್ದರೂ ಪರ್ಯಾಯ ಜಮೀನು!: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನ ಪಾಲುದಾರರ ಕಂಪೆನಿ

Pinterest LinkedIn Tumblr

pvec17apr16jugrappaಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ವಾಣಿಜ್ಯ ಪಾಲುದಾರ ಡಾ. ರಾಜೇಶ್ ಗೌಡ ಮಾಲೀಕತ್ವದ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ ಕಂಪೆನಿಗೆ ಸೇರಬೇಕಾದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿದ್ದರೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಪೆನಿಗೆ ಹೆಬ್ಬಾಳದಲ್ಲಿ 2.11 ಎಕರೆ ಜಮೀನು ನೀಡಿದೆ.
ಕೇತಮಾರನಹಳ್ಳಿಯ (ಈಗಿನ ಮಹಾಲಕ್ಷ್ಮಿ ಲೇಔಟ್‌) ಸರ್ವೆ ಸಂಖ್ಯೆ 174 ಮತ್ತು 175ರಲ್ಲಿ ಕಂಪೆನಿಗೆ ಸೇರಿದ್ದ ಒಟ್ಟು 2.32 ಲಕ್ಷ ಚದರ ಅಡಿ ಜಮೀನನ್ನು ಸ್ವಾಧೀನ ಮಾಡಿಕೊಂಡಿದ್ದಕ್ಕಾಗಿ ಪ್ರಾಧಿಕಾರವು 1987ರಲ್ಲಿ ನಗರ ಸಿವಿಲ್‌ ನ್ಯಾಯಾಲಯದಲ್ಲಿ ₹ 29.09 ಲಕ್ಷ ಹಣವನ್ನು ಠೇವಣಿ ಇರಿಸಿತು. ಈ ಮೊತ್ತ ಇಂದಿಗೂ ನ್ಯಾಯಾಲಯದ ಸುಪರ್ದಿ ಯಲ್ಲೇ ಇದೆ. ಈ ಕಂಪೆನಿಗೆ ಈಚೆಗೆ ಹಂಚಿಕೆ ಮಾಡಲಾದ ಬದಲಿ ಜಮೀನು ಎಚ್‌ಬಿಆರ್‌ ಬಡಾವಣೆ ವ್ಯಾಪ್ತಿಗೆ ಸೇರಿದೆ. ಜಮೀನಿನ ಅಂದಾಜು ಮೌಲ್ಯ ₹ 150 ಕೋಟಿ.
ಡಾ. ರಾಜೇಶ್ ಗೌಡ ಅವರು ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ ಕಂಪೆನಿಯ ಮಾಲೀಕರಲ್ಲಿ ಒಬ್ಬರು. ಅಲ್ಲದೆ, ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ. ಯತೀಂದ್ರ ಅವರೂ ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸಲ್ಯೂಷನ್ಸ್‌ ಕಂಪೆನಿಯ ಸ್ಥಾಪಕ ನಿರ್ದೇಶಕರು ಕೂಡ ಹೌದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಆರಂಭಿಸುವ ಗುತ್ತಿಗೆ ಪಡೆದ ನಂತರ ಈ ಕಂಪೆನಿ ವಿವಾದಕ್ಕೆ ಸಿಲುಕಿದೆ.
ಬಿಡಿಎ ಜಮೀನು ಸ್ವಾಧೀನ ಕಾನೂನಿನ ಅನ್ವಯ, ಜಮೀನು ಕಳೆದುಕೊಳ್ಳುವವರು ಇತ್ತೀಚಿನವರೆಗೆ ಹಣಕಾಸಿನ ಪರಿಹಾರಕ್ಕೆ ಮಾತ್ರ ಅರ್ಹರಾಗಿದ್ದರು. ಬಿಡಿಎ ಮೂಲಕ ಆಗುವ ಜಮೀನು ಸ್ವಾಧೀನಕ್ಕೆ ಹೊಸ ನೀತಿಯನ್ನು ಇತ್ತೀಚೆಗೆ ಜಾರಿಗೆ ತಂದ ಸರ್ಕಾರ, ಜಮೀನು ಕಳೆದುಕೊಳ್ಳುವವರು ಅಭಿವೃ ದ್ಧಿಪಡಿಸಿದ ಜಮೀನಿನಲ್ಲಿ ಶೇಕಡ 40 ರಷ್ಟನ್ನು ಅಥವಾ ಹಣಕಾಸಿನ ಪರಿಹಾರ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ. ಆದರೆ ಪರ್ಯಾಯ ಜಮೀನು ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ.
ಕಾನೂನು ಅಭಿಪ್ರಾಯ ಮಾತ್ರ ಆಧರಿಸಿ ಪ್ರಾಧಿಕಾರವು ಶಾಂತಾ ಇಂಡಸ್ಟ್ರಿಯಲ್ ಎಂಟರ್‌ಪ್ರೈಸಸ್‌ ಕಂಪೆನಿಗೆ ಪರ್ಯಾಯ ಜಮೀನು ನೀಡುವ ನಿರ್ಧಾರ ಕೈಗೊಂಡಿರುವುದು ಈಗ ಬೆಳಕಿಗೆ ಬಂದಿದೆ.
ಅಲ್ಲದೆ, ಈ ಕಂಪೆನಿಗೆ ಸಹಾಯ ಮಾಡುವ ಇರಾದೆ ಪ್ರಾಧಿಕಾರಕ್ಕೆ ಬಂದಿದ್ದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರದ ದಿನಗಳಲ್ಲಿ ಎಂಬಂತೆ ಕಾಣುತ್ತಿದೆ. ಪರ್ಯಾಯ ಜಮೀನು ಮಂಜೂರು ಮಾಡುವಂತೆ ಈ ಕಂಪೆನಿ 2011ರಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಪ್ರಾಧಿಕಾರ ಆ ಕುರಿತು ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.
ಕಂಪೆನಿಯ ಕೋರಿಕೆಯ ಅನುಸಾರ ₹ 29.09 ಲಕ್ಷ ಪರಿಹಾರ ನೀಡಲು ಪ್ರಾಧಿಕಾರ ತೀರ್ಮಾನಿಸಿತ್ತು ಎಂಬುದು ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳು ಹೇಳುತ್ತಿವೆ.
ಪ್ರತಿ ಚದರ ಅಡಿಗೆ ಪರಿಹಾರ ರೂಪದಲ್ಲಿ ₹20 ಪಡೆಯಲು ಕಂಪೆ ನಿಯ ಅಂದಿನ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸ್ ಅವರು ಒಪ್ಪಿಗೆ ಸೂಚಿಸಿದ್ದರು. ಇದಾದ ನಂತರ ಪ್ರಾಧಿ ಕಾರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿತ್ತು.
ಈ ಕಂಪೆನಿಗೆ ಜಮೀನು ಕೊಡು ವುದಕ್ಕೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ಪಡೆಯಲು ಪ್ರಾಧಿಕಾರವು ₹2.25 ಲಕ್ಷ ಖರ್ಚು ಮಾಡಿದೆ. 2014ರ ಏಪ್ರಿಲ್‌ನಲ್ಲಿ ಪ್ರಾಧಿಕಾರವು ಸುಪ್ರೀಂ ಕೋರ್ಟ್‌ ವಕೀಲ ಇ.ವಿ. ವೇಣು ಗೋಪಾಲ್ ಅವರಿಗೆ ₹ 45 ಸಾವಿರ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಆರ್. ಲಕ್ಷ್ಮಣನ್ ಅವರಿಗೆ ₹ 1.80 ಲಕ್ಷ ಪಾವತಿಸಿದೆ.
‘ಕಾನೂನು ಪಾಲಿಸದೆ ಜಮೀನು ಸ್ವಾಧೀನ ಮಾಡಿದಾಗ, ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ಅಷ್ಟೇ ಬೆಲೆಯ ಇನ್ನೊಂದು ಜಮೀನು ಕೊಡಲು ಬಿಡಿಎಗೆ ಅವಕಾಶವಿದೆ’ ಎಂದು ಅವರು ಕಾನೂನು ಅಭಿಪ್ರಾಯ ನೀಡಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಧಾರ
ಬೆಂಗಳೂರು: ಶಾಂತಾ ಇಂಡ ಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ ಬದಲಿ ಭೂಮಿ ನೀಡಿದ ಹಾಗೂ ಕೆಂಪೇ ಗೌಡ ಬಡಾವಣೆಯ ಜಮೀನನನ್ನು ಡಿನೋಟಿಫೈ ಮಾಡಿದ ನಿರ್ಧಾರಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.
‘ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ ಬದಲಿ ಭೂಮಿ ನೀಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ. ಆದರೆ, ಬದಲಿ ಭೂಮಿ ನೀಡಬೇಕು ಎಂದು ಕಂಪನಿ ಪರವಾಗಿ ಎಂ.ಶ್ರೀಧರ್‌ ಎಂಬವರು 2011ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಷರಾ ಬರೆದಿದ್ದರು. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯುವ ಯತ್ನ ಸರಿಯಲ್ಲ’ ಎಂದರು.
ಕೆಂಪೇಗೌಡ ಬಡಾವಣೆಯ 84 ಎಕರೆಯನ್ನೂ ಬಿಜೆಪಿ ಅಧಿಕಾರ ದಲ್ಲಿದ್ದಾಗಲೇ ಡಿನೋಟಿಫೈ ಮಾಡಲಾಗಿದೆ. ನ್ಯಾಯಾಲ ಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರ ದಲ್ಲಿಯೂ ಇದು ಬಹಿರಂಗ ವಾಗಿದೆ. ಆದರೆ, ಈಗ ಬಿಜೆಪಿ ಅನಗತ್ಯವಾಗಿ ಆರೋಪ ಮಾಡುತ್ತಿದೆ ಎಂದರು.
ಬಿಎಸ್‌ವೈ ಮೋಜಿನ ಪ್ರವಾಸ: ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ಅವರು ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನದ ಬದಲು ಮಾಜಿ ಸಚಿವ ಮುರುಗೇಶ ನಿರಾಣಿ ನೀಡಿದ ಐಷಾರಾಮಿ ಕಾರಿನಲ್ಲಿ ಮೋಜಿನ ಪ್ರವಾಸ ಕೈಗೊಳ್ಳುತ್ತಾರೆ’ ಎಂದು ಉಗ್ರಪ್ಪ ಆರೋಪಿಸಿದರು.
ನಿರಾಣಿ ಅವರು ಕಬ್ಬು ಬೆಳೆಗಾರರ ₹ 180 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ರೈತ ಪರ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ತಮಗೆ ಕಾರು ನೀಡುವ ಬದಲು ರೈತರ ಬಾಕಿ ನೀಡುವಂತೆ ಸೂಚಿಸಬೇಕಿತ್ತು ಎಂದು ಹೇಳಿದರು.

Write A Comment