ಕರ್ನಾಟಕ

ಮೌಲ್ಯಮಾಪನ ಕೇಂದ್ರಗಳಲ್ಲಿ ಬೆರಳೆಣಿಕೆ ಸಿಬ್ಬಂದಿ

Pinterest LinkedIn Tumblr

pvec17apr16jstrongroomಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಕೋಡಿಂಗ್‌ ಕಾರ್ಯ ಆರಂಭವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದರೂ ಸಹ ಶನಿವಾರ ನಗರದಲ್ಲಿರುವ ಮೌಲ್ಯಮಾಪನ ಕೇಂದ್ರಗಳಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಕಂಡುಬಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರು ಶನಿವಾರ ಹಾಜರಾಗಬೇಕು ಎಂದು ಸೂಚನೆ ಹೊರಡಿಸಿತ್ತು.
‘ಮೌಲ್ಯಮಾಪನಕ್ಕೆ ಸುಮಾರು 20 ಸಾವಿರ ಉಪನ್ಯಾಸಕರ ಅಗತ್ಯ ಇದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ 7,000 ಉಪನ್ಯಾಸಕರು ಮೌಲ್ಯಮಾಪನಕ್ಕೆ ಸಿದ್ಧರಿದ್ದಾರೆ. ಸೋಮವಾರದಿಂದ ಮೌಲ್ಯಮಾಪನ ಆರಂಭವಾಗುತ್ತದೆ. ಶನಿವಾರ ಕೋಡಿಂಗ್‌ ಕಾರ್ಯ ಆರಂಭವಾಗಿದ್ದು, ಕೆಲವು ಕಡೆ ಪೂರ್ಣಗೊಂಡಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ಹೇಳಿದ್ದಾರೆ.
ಆದರೆ, ಮೌಲ್ಯಮಾಪನ ನಡೆಯಬೇಕಿರುವ ನಗರದ ಕೆಲವು ಕಾಲೇಜು ಕೇಂದ್ರಗಳನ್ನು ಗಮನಿಸಿದಾಗ ಪರಿಸ್ಥಿತಿ ಹಾಗಿರಲಿಲ್ಲ.
ಭೌತ ವಿಜ್ಞಾನ ಮೌಲ್ಯಮಾಪನ ನಡೆಯುವ ಶೇಷಾದ್ರಿಪುರ ಪಿಯು ಕಾಲೇಜಿನಲ್ಲಿ 500 ಸಹಾಯಕ ಮೌಲ್ಯಮಾಪಕರು ಮತ್ತು 100 ಮಂದಿ ಮುಖ್ಯ ಮೌಲ್ಯಮಾಪಕರ ಅಗತ್ಯ ಇದೆ. ಆದರೆ, ಮಧ್ಯಾಹ್ನದವರೆಗೂ 30ಕ್ಕಿಂತ ಹೆಚ್ಚು ಸಿಬ್ಬಂದಿ ಹಾಜರಾಗಲಿಲ್ಲ. ಅಲ್ಲದೆ, ಯಾವುದೇ ಕೆಲಸ ಇಲ್ಲದಿದ್ದರಿಂದ ಇವರೂ ಮಧ್ಯಾಹ್ನದ ವೇಳೆಗೆ ಜಾಗ ಖಾಲಿ ಮಾಡಿದರು.
ಇಂಗ್ಲಿಷ್ ಮೌಲ್ಯಮಾಪನ ನಡೆಯುವ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ 115 ಮುಖ್ಯ ಮೌಲ್ಯಮಾಪಕರು ಮತ್ತು 600 ಮಂದಿ ಸಹಾಯಕ ಮೌಲ್ಯಮಾಪಕರ ಅಗತ್ಯ ಇದೆ.
ಆದರೆ, ಈ ಕೇಂದ್ರದ ಮುಖ್ಯ ಮೌಲ್ಯಮಾಪಕ, ವೀಕ್ಷಕ ಮತ್ತು ಕಾಲೇಜಿನ ಕೆಲವು ಸಿಬ್ಬಂದಿ ಹೊರತುಪಡಿಸಿದರೆ ಕೋಡಿಂಗ್‌ ಮಾಡಬೇಕಾದ ಸಿಬ್ಬಂದಿಯೇ ಸುಳಿಯಲಿಲ್ಲ.
ಇದೇ ರೀತಿ ಇಂಗ್ಲಿಷ್‌ ಮೌಲ್ಯಮಾಪನ ನಡೆಯಬೇಕಿದ್ದ ವಿಜಯ ಕಾಲೇಜಿನಲ್ಲಿಯೂ ಪರಿಸ್ಥಿತಿ ಭಿನ್ನವಾಗಿ ಇರಲಿಲ್ಲ.
ಗಣಿತ ವಿಷಯ ಮೌಲ್ಯಮಾಪನ ನಡೆಯಬೇಕಿದ್ದ ಸೇಂಟ್‌ ಅಣ್ಣಾ ಕಾಲೇಜಿನಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಹಾಜರಿದ್ದುದು ಕಂಡುಬಂತು.
ನೋಟಿಸ್‌ ನೀಡಲು ನಿರ್ಧಾರ
ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕುಮಾರನಾಯಕ್‌ ವರದಿ ಜಾರಿಗೆ ಆಗ್ರಹಿಸಿ ಪಿ.ಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಏ.3ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ ಹಲವು ಸುತ್ತಿನ ಸಂಧಾನ ಸಭೆ ನಡೆಸಿದರೂ ಯಶಸ್ವಿಯಾಗಿಲ್ಲ.
‘ಎಲ್ಲ ಉಪನ್ಯಾಸಕರೂ ಕಡ್ಡಾಯವಾಗಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಕರ್ನಾಟಕ ಶಿಕ್ಷಣ ಕಾಯಿದೆ–1983ರ ಸೆಕ್ಷನ್–28ರ ಅಡಿ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಯಿದೆ ಏನು ಹೇಳುತ್ತದೆ?: ಮೌಲ್ಯಮಾಪನಕ್ಕೆ ಸಂಬಂಧಿಸಿದ ಯಾವುದೇ ಕಾರ್ಯದಲ್ಲಿ ಪಾಲ್ಗೊಳ್ಳಲು ಉಪನ್ಯಾಸಕರು ನಿರಾಕರಿಸಿದಲ್ಲಿ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಅಕ್ರಮದಲ್ಲಿ ಭಾಗಿಯಾದ ಕಾಲೇಜುಗಳ ಉಪನ್ಯಾಸಕರಿಗೂ ಕರೆ
ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿ ಸಿಐಡಿ ತನಿಖೆ ಎದುರಿಸುತ್ತಿರುವ 11 ಕಾಲೇಜುಗಳ ಉಪನ್ಯಾಸಕರಿಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವಂತೆ ಪತ್ರ ಕಳುಹಿಸಿದೆ.
ವಿದ್ಯಾರಣ್ಯಪುರದ ನಾರಾಯಣ ಹಾಗೂ ಚೈತನ್ಯ ಪದವಿ ಪೂರ್ವ ಕಾಲೇಜುಗಳು, ಯಲಹಂಕದ ದೀಕ್ಷಾ, ಕೆಂಪಾಪುರದ ಪ್ರೆಸಿಡೆನ್ಸಿ, ಸಂಜಯನಗರದ ಬೃಂದಾವನ, ಕಲ್ಯಾಣ ನಗರದ ರಾಯಲ್‌ ಕನ್‌ಕರ್ಡ್‌, ಮಂಗಳೂರಿನ ಎಕ್ಸ್‌ಪರ್ಟ್‌ ಮತ್ತು ಮಹೇಶ್‌ ಕಾಲೇಜುಗಳು, ಬಳ್ಳಾರಿಯ ನಾರಾಯಣ ಮತ್ತು ಚೈತನ್ಯ ಕಾಲೇಜುಗಳು ಹಾಗೂ ತುಮಕೂರಿನ ದೀಕ್ಷಾ ಕಾಲೇಜಿನ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರ ಕಳುಹಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಈ ಕಾಲೇಜುಗಳ ಮೇಲೆ ದಾಳಿ ಮಾಡಿ ಅಲ್ಲಿನ ಪ್ರಾಂಶುಪಾಲರು, ಉಪನ್ಯಾಸಕರು ಕಚೇರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವು ಕಾಲೇಜುಗಳ ಸಿಸಿಟಿವಿ ಕ್ಯಾಮೆರಾಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮುಂದುವರಿದ ಪ್ರತಿಭಟನೆ: ಈ ಮಧ್ಯೆ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮುಂದುವರಿಸಿವೆ. ಸಾಹಿತಿಗಳಾದ ಡಾ.ನಲ್ಲೂರು ಪ್ರಸಾದ್‌, ಎಚ್‌.ಎಲ್‌. ಪುಷ್ಪಾ, ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್‌.ಎಲ್‌. ಮುಕುಂದರಾಜ್‌ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.
‘ಕೋಡಿಂಗ್‌ ಕಾರ್ಯ ಮಾಡಬೇಕು ಎಂದರೆ 6 ಸಾವಿರ ಉಪನ್ಯಾಸಕರು ಎರಡು ದಿನ ಕಾರ್ಯ ನಿರ್ವಹಿಸಬೇಕು. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಇದುವರೆಗೂ ಇಂತಹ ಕಾರ್ಯವನ್ನೇ ಮಾಡದ ಅನನುಭವಿ 300–400 ಸಿಬ್ಬಂದಿಯಿಂದ ಕೋಡಿಂಗ್‌ ಮಾಡಿಸಲು ಮುಂದಾಗಿದೆ. ಇದು ಎಂದಿಗೂ ಸಾಧ್ಯವಿಲ್ಲ’ ಎಂದು ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.
‘ಪ್ರತಿಭಟನೆ ಮುಂದುವರಿಸುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದರು.

Write A Comment