ಕರ್ನಾಟಕ

ಗೊರೂರು: ಕಸ ಸಂಸ್ಕರಣ ಘಟಕಕ್ಕೆ ವಿರೋಧ; ರೈತರೊಂದಿಗೆ ನಡೆದ ಸಮಾಲೋಚನಾ ಸಭೆ ವಿಫಲ

Pinterest LinkedIn Tumblr

goಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿಯ ಗೊರೂರು ಗ್ರಾಮದ ಬಳಿ ಶುಕ್ರವಾರ(ಏ,22) ಬಿಬಿಎಂಪಿ ಕಸ ಸಂಸ್ಕರಣ ಘಟಕ ಸ್ಥಾಪಿಸಲು ಭೂಮಿ ಪೂಜೆ ಮಾಡುವುದನ್ನು ಸರ್ಕಾರ ಕೈಬಿಡ ಬೇಕು. ಇಲ್ಲವಾದರೆ ನಾವು ಸೇರಿದಂತೆ 500ಕ್ಕಿಂತ ಹೆಚ್ಚು ಜನ ರೈತರು ನಮ್ಮ ಸಾವಿಗೆ ಸತಾರಾಮ್‌ ಕಂಪೆನಿ ಮತ್ತು ಸರ್ಕಾರವೇ ಕಾರಣ ಎಂದು ಚೀಟಿ ಬರೆದಿಟ್ಟು ವಿಷ ಸೇವಿಸಿ ಸಾಯುತ್ತೇವೆ ಎಂದು ಕಂಚುಗಲ್‌ ಬಂಡೇ ಮಠಾಧ್ಯಕ್ಷ ಹಾಗೂ ರೈತಪರ ಹೋರಾಟಗಾರ ಬಸವಲಿಂಗ ಸ್ವಾಮಿಜಿ ನುಡಿದರು.

ತಾಲ್ಲೂಕಿನ ಸೋಲೂರಿನಲ್ಲಿ ಶನಿವಾರ ನಡೆದ ಗೊರೂರು ಕಸ ಸಂಸ್ಕರಣ ಘಟಕ ಸ್ಥಾಪನೆಯ ಬಗ್ಗೆ ರೈತರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ರೈತರ ಮಾತುಗಳನ್ನು ಆಲಿಸಿ ಖಚಿತ ತೀರ್ಮಾನಕ್ಕೆ ಬಂದಿರುವುದಾಗಿ ವಿವರಿಸಿದರು.

ಸರ್ಕಾರ ಮತ್ತು ಅಧಿಕಾರಿಗಳು ಸತಾರಾಮ್‌ ಕಂಪೆನಿಯ ಹಣದ ಪ್ರಭಾವದಿಂದ 16 ಹಳ್ಳಿ ಜನ ಜಾನುವಾರು ಪಕ್ಷಿ, ಜಲ, ಪರಿಸರವನ್ನು ನಾಶಮಾಡುವ ವರದಿ ನೀಡಿದ್ದಾರೆ. ನ್ಯಾಯಾಲಯಕ್ಕೂ ಸಹ ಸತಾರಾಮ್‌ ಕಂಪೆನಿಯವರು ತಪ್ಪು ಮಾಹಿತಿ ನೀಡಿದ್ದಾರೆ.

ರೈತರ ಮೇಲೆ ಖಾಸಗಿ ಕಂಪನಿಯವರು ಮತ್ತು ಸರ್ಕಾರ ದಬ್ಬಾಳಿಕೆ ನಡೆಸುವುದನ್ನು ಕೈಬಿಡಬೇಕು. ಶರಣ ಸಂಗನ ಮಹಂತಪ್ಪ ಆಡಿದ ಜಾಗದಲ್ಲಿ ₹ 250 ಕೋಟಿ ವೆಚ್ಚದಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪನೆಯಾದರೆ ನಮ್ಮೆಲ್ಲರ ಸರ್ವನಾಶ ಖಂಡಿತ. ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಕಂಪೆನಿಯವರು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಬಸವಲಿಂಗ ಸ್ವಾಮಿಜಿ ಆಗ್ರಹಿಸಿದರು.

ರೈತರನ್ನು ವಂಚಿಸಿ ಏನೂ ಮಾಡುವುದಿಲ್ಲ ಎಂದು ರಾಮನಗರ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಪ್ರಸಾದ್‌ 3 ಗಂಟೆಗಳ ಕಾಲ ಗೊರೂರು ಬಳಿ ಕಸ ಸಂಸ್ಕರಣ ಘಟಕ ಸ್ಥಾಪನೆ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು. ರೈತರ ಸಮಸ್ಯೆಗಳನ್ನು ಆಲಿಸಿದ ಉಪವಿಭಾಗಾಧಿಕಾರಿಗಳು ಏನೂ ಮಾಡಲಾರದ ಸ್ಥಿತಿಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.

ನೆಲಮಂಗಲದ ಮಾಜಿ ಶಾಸಕ ನಾಗರಾಜು ಮಾತನಾಡಿ, ಕಸ ಸಂಸ್ಕರಣ ಘಟಕದ ಬದಲು ಸೋಲಾರ್‌ ವಿದ್ಯುತ್‌ ಸ್ಥಾಪನೆಯ ಘಟಕ ಆರಂಭಿಸಬೇಕು. ಸರ್ಕಾರ ಟೆಂಡರ್‌ ವಾಪಸ್ಸು ಪಡೆಯಬೇಕು. ಗೊರೂರು ಬಳಿ ಕಸ ಸಂಸ್ಕರಣ ಘಟಕ ಸ್ಥಾಪನೆಯ ವಿರುದ್ದ ರೈತರೊಂದಿಗೆ ನಾನೂ ಸಾಯುತ್ತೇನೆ. ಜನರಿಗಿಂತ ನ್ಯಾಯಾಲಯ ದೊಡ್ಡದಲ್ಲ. ಕಸ ಘಟಕದ ಟೆಂಡರ್‌ನಲ್ಲೂ ಅವ್ಯವಹಾರ ನಡೆದಿದೆ ಎಂದರು.

Write A Comment