ಕರ್ನಾಟಕ

2 ವರ್ಷಗಳಲ್ಲಿ ನರ್ಸ್, ವೈದ್ಯರ ಕೊರತೆ ಇರದು ಸಚಿವ ಯು.ಟಿ. ಖಾದರ್ ಭರವಸೆ

Pinterest LinkedIn Tumblr

utಬೆಂಗಳೂರು, ಎ.೧೦: ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಮುಂದಿನ ೨ ವರ್ಷಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳ ಕೊರತೆಯನ್ನು ನೀಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ವಿಷನ್ ಕರ್ನಾಟಕ ಸಂಸ್ಥೆಯ ನಗರದಲ್ಲಿಂದು ಏರ್ಪಡಿಸಿದ್ದ ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು ಇಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಇನ್ನಷ್ಟು ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದು, ಅಂತಿಮವಾಗಿ ಹಣಕಾಸು ಇಲಾಖೆಯ ನಿರ್ಧಾರದ ಮೇಲೆ ಇವು ನಿಂತಿವೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ರಾಜ್ಯದ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಿದರು.
ಶ್ರೀಮಂತರಿಗೆ ಸಿಗುವ ಆರೋಗ್ಯ ಸೇವೆಗಳು ಬಡವರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ದಾರರಿಗೂ ಖಾಸಗಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ದೊರೆಯುವಂತೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಿ ಅವುಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮಕೈಗೊಂಡಿದ್ದು, ಅಲ್ಲಿಗೆ ಸ್ಥಳೀಯ ಜನಪ್ರತಿನಿಧಿಗಳು ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಮಾತ್ರವಲ್ಲ ತಿಂಗಳಿಗೊಮ್ಮೆ ಸಭೆ ನಡೆಸಿ ಅಲ್ಲಿನ ಕುಂದುಕೊರತೆಗಳನ್ನು ತಮ್ಮ ಗಮನಕ್ಕೆ ತಂದರೆ ಸಮಸ್ಯೆ ನಿವಾರಣಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ನಗರದ ಘೋಷಾ ಆಸ್ಪತ್ರೆಯನ್ನು ನವೀಕರಿಸಲಾಗುತ್ತಿದ್ದು, ಇನ್ನು ಆರು ತಿಂಗಳಲ್ಲಿ ಈ ಕಾಮಗಾರಿಗಳು ಮುಗಿಯಲಿವೆ ಎಂದು ಹೇಳಿದ ಅವರು, ತಾಲೂಕು ಆಸ್ಪತ್ರೆಗಳಿಗೆ ೧೫-೨೦ ನಿಮಿಷಗಳಲ್ಲಿ ಆಂಬುಲೆನ್ಸ್ ತಲುಪುವಂತೆ ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಅದರಂತೆ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಹಾಗೂ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಮ್ಮದು ಅಹಿಂದ ಸರ್ಕಾರ. ಹಾಗಾಗಿ ಅಹಿಂದ ವರ್ಗಕ್ಕೆ ಮೋಸ ಮಾಡುವುದಿಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹೆಚ್ಚಿರುವ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯುವಂತೆ ಮಾಡಲು ಕ್ರಮಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ಈ ವರ್ಗಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು. ಬೆಂಗಳೂರು ಹೊರವಲಯದಲ್ಲಿ ಸುಸಜ್ಜಿತ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸಂಬಂಧ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಗೆ ಬರುವ ದೂರುಗಳು, ಅಹವಾಲುಗಳಿಗೆ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂಬ ಆರೋಪಕ್ಕೆ ಉತ್ತಿರಿಸಿದ ಅವರು, ಈ ಬಗ್ಗೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ಅಹವಾಲುಗಳು ಸ್ವೀಕಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಸರ್ಕಾರ ಸ್ಥಳ, ಯಂತ್ರ, ಔಷಧಗಳನ್ನು ನೀಡುತ್ತದೆ. ಎನ್‌ಜಿಒಗಳು ಮುಂದೆ ಬಂದು ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಡಯಾಲಿಸಿಸ್ ಸೇವೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷ, ಸುಹೈಲ್ ಅಹ್ಮದ್, ಅನ್ವರ್ ಶರೀಪ್, ಫಾರೂಕ್, ರೂಮಾನ್ ಬೇಗ್ ಮತ್ತಿತರರು ಭಾಗವಹಿಸಿದ್ದರು.

Write A Comment