ಕರ್ನಾಟಕ

ಮೆಕ್ಕಾ ಇಮಾಮ್‌ ಪ್ರಾರ್ಥನೆಗೆ ಜನಸಾಗರ

Pinterest LinkedIn Tumblr

masi

ಮೈಸೂರು: ಮೆಕ್ಕಾದ ಅಲ್ ಮುಖರಮ್ ಮಸೀದಿಯ ಇಮಾಮ್‌ ಶೇಖ್ ಸಾಲೇಹ ಬಿನ್‌ ಮಹಮ್ಮದ್‌ ತಾಲೇಬ್‌ ನೇತೃತ್ವದಲ್ಲಿ ಇಲ್ಲಿನ ರಾಜೀವನಗರದ ಈದ್ಗಾ ಮೈದಾನದಲ್ಲಿ ಶುಕ್ರವಾರ ನಡೆದ ಸಾಮೂಹಿಕ (ಜುಮಾ) ಪ್ರಾರ್ಥನೆಗೆ ಜನಸಾಗರ ಹರಿದು ಬಂದಿತ್ತು.
ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು 1.5 ಲಕ್ಷಕ್ಕೂ ಅಧಿಕ ಮಸ್ಲಿಮರು ಧಾವಿಸಿದ್ದರು.
ಬೆಳಿಗ್ಗೆ 10.30ರಿಂದಲೇ ಭಕ್ತರು ಈದ್ಗಾ ಮೈದಾನಕ್ಕೆ ಧಾವಿಸಲಾರಂಭಿಸಿದರು. ವೇದಿಕೆಯ ಮುಂಭಾಗದಲ್ಲಿ ನಿರ್ಮಿಸಿದ್ದ ಸಭಾಂಗಣ ಭರ್ತಿಯಾಯಿತು. ಖಾಲಿ ನಿವೇಶನಗಳಲ್ಲಿ ಚಾಪೆಯನ್ನು ಹಾಸಿಕೊಂಡು ಪ್ರಾರ್ಥನೆಗೆ ಸಜ್ಜಾದರು. ಮಧ್ಯಾಹ್ನ 1ಕ್ಕೆ ಇಮಾಮ್‌ ಮಹಮ್ಮದ್‌ ತಾಲೇಬ್‌ ವೇದಿಕೆಗೆ ಬರುತ್ತಿದ್ದಂತೆ ಭಕ್ತರ ಕರತಾಡನ ಮುಗಿಲು ಮುಟ್ಟಿತು.
ಮುಸ್ಲಿಮರು ಪಾಲಿಸಬೇಕಾದ ಕರ್ತವ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನದ ಕುರಿತು 10 ನಿಮಿಷ ಪ್ರವಚನ ನೀಡಲಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕುರಾನ್‌ ಉಲ್ಲೇಖಗಳಿರುವ ಜುಮಾ ನಮಾಜ್‌ನ ಭಾಗವಾದ ಕುತುಬಾ ಪಾರಾಯಣ ಮಾಡಿದ ಇಮಾಮ್‌, ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ. ಜಾತಿ, ಧರ್ಮದ ಎಲ್ಲೆ ಮೀರಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪರಸ್ಪರರನ್ನು ಪ್ರೀತಿಯಿಂದ ಕಾಣಲು ಯಾವುದೇ ಧರ್ಮದ ಬೇಲಿ ಅಡ್ಡ ಬರಬಾರದು. ಧರ್ಮಕ್ಕಿಂತಲೂ ಸಹೋದರತೆ ದೊಡ್ಡದು. ಧಾರ್ಮಿಕ ಭಾವನೆಗಳನ್ನು ಪರಸ್ಪರ ಗೌರವಿಸಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ಮಾಡಬಾರದು. ಮಾನವೀಯತೆಯ ನೆಲೆಗಟ್ಟಿನ ಮೇಲೆ ಸಮಾಜವನ್ನು ಕಟ್ಟೋಣ ಎಂದು ಕರೆ ನೀಡಿದರು.

Write A Comment