ಕರ್ನಾಟಕ

‘ಕೈ’ ಕಾರ್ಯಕರ್ತರಿಗೆ ಸಿದ್ದು ಯುಗಾದಿ ಗಿಫ್ಟ್: ನಿಗಮ ಮಂಡಳಿ ನೇಮಕಕ್ಕೆ ಅಂಕಿತ

Pinterest LinkedIn Tumblr

siddu

ಬೆಂಗಳೂರು: ಯುಗಾದಿ ಹಬ್ಬದ ಮುನ್ನಾದಿನ ಕಾಂಗ್ರೆಸ್‌ ಕಾರ್ಯಕರ್ತರ ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸಿದ್ದಾರೆ. ರಾಜ್ಯದ 110 ನಿಗಮ- ಮಂಡಳಿಗಳಿಗೆ 788 ನಿರ್ದೇಶಕರು ಹಾಗೂ ಸದಸ್ಯರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಂಕಿತ ಹಾಕಿದ್ದಾರೆ.

ಎಂಎಸ್‌ಐಎಲ್‌, ಕೆಯುಐಡಿಎಫ್ಸಿ, ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ, ದೇವರಾಜ ಅರಸು ಹಿಂದುಳಿದ ವರ್ಗದವರ ಅಭಿವೃದ್ಧಿ ಮಂಡಳಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕಂಠೀರವ ಸ್ಟುಡಿಯೋ ನಿಗಮ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತೆಂಗು ನಾರು ಅಭಿವೃದ್ಧಿ ಮಂಡಳಿ, ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಕರ್ನಾಟಕ ಉಗ್ರಾಣ ನಿಗಮ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ಕರ್ನಾಟಕ ಗೃಹ ಮಂಡಳಿ, ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ಎಲ್ಲಾ ನಿಗಮ- ಮಂಡಳಿಗಳ ನೇಮಕಾತಿ ಪಟ್ಟಿಗೆ ಸಿಎಂ ಅಂಕಿತ ಬಿದ್ದಿದ್ದು, ಈ ಸಂಬಂಧ ಆದೇಶವನ್ನು ನಿಗಮ-ಮಂಡಳಿಗಳು ಯಾವ ಇಲಾಖೆಗಳ ವ್ಯಾಪ್ತಿಯಲ್ಲಿ ಬರುತ್ತವೋ ಆಯಾ ಇಲಾಖೆಗಳಿಗೆ ರವಾನಿಸಲಾಗಿದೆ.

ಇನ್ನು ಆಯಾ ಇಲಾಖೆಗಳೇ ಆಯ್ಕೆಯಾದ ನಿರ್ದೇಶಕರಿಗೆ ಆದೇಶ ಪತ್ರವನ್ನು ರವಾನಿಸಲಿವೆ. ಇದರೊಂದಿಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸಿದರೂ ಕಾರ್ಯಕರ್ತರಿಗೆ ಅಧಿಕಾರ ನೀಡಿಲ್ಲ ಎಂಬ ಕೊರಗು ಇದೀಗ ಕರಗಲಿದೆ. ತೀವ್ರ ಬೇಡಿಕೆಯ ನಂತರ 82 ನಿಗಮ- ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿಯನ್ನು ಸರ್ಕಾರ ಮಾಡಿತ್ತು. ಆದರೆ, ನಿರ್ದೇಶಕರು ಹಾಗೂ ಸದಸ್ಯರ ನೇಮಕಾತಿಯನ್ನು ಮಾಡಿರಲಿಲ್ಲ.

ಈ ಬಗ್ಗೆ ಕಾರ್ಯಕರ್ತರು ತೀವ್ರ ಒತ್ತಡ ನಿರ್ಮಾಣ ಮಾಡಿದರೂ, ಚುನಾವಣೆಗಳ ನೆಪ ಮುಂದು ಮಾಡಿ ನೇಮಕಾತಿ ಮುಂದೂಡಲಾಗುತ್ತಿತ್ತು. ಅಂತಿಮವಾಗಿ ಯುಗಾದಿ ಹಬ್ಬಕ್ಕೆ ಸರಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸರ್ಕಾರ ಕೊಡುಗೆ ನೀಡಿದಂತಾಗಿದೆ.

Write A Comment