ಕರ್ನಾಟಕ

ವಿಧಾನಸೌಧದ ಸಚಿವರ ಕಚೇರಿಯಲ್ಲೇ ಪ್ರಶ್ನೆ ಪತ್ರಿಕೆ ಡೀಲ್‌ ನಡೆದಿತ್ತಾ?

Pinterest LinkedIn Tumblr

vidana-soudaಬೆಂಗಳೂರು: ರಾಜ್ಯಾದ್ಯಂತ ವಿದ್ಯಾರ್ಥಿ ಸಮೂಹದಲ್ಲಿ ಕೋಲಾಹಲ ಮೂಡಿಸಿರುವ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ಡೀಲ್‌ ವಿಧಾನ ಸೌಧದಲ್ಲಿರುವ ಸಚಿವರ ಕಚೇರಿಯಲ್ಲೇ ನಡೆದಿತ್ತು ಎಂಬ ಮಹತ್ವದ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ರಹಸ್ಯ ಬೇಧಿಸಿ ಸಿಐಡಿಯಿಂದ ಬಂಧನಕ್ಕೊಳಗಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರ ಆಪ್ತ ಸಹಾಯಕ ಓಬಳರಾಜು ಅವರು ಸಚಿವರ ಕಚೇರಿಯಲ್ಲೇ ಡೀಲ್‌ ಕುದುರಿಸಿದ್ದರು ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.

ಹಗರಣದ ಕಿಂಗ್‌ಪಿನ್‌ಗಳಾದ ಓಬಳೇಶ್‌ ಮತ್ತು ಲೋಕೋಪಯೋಗಿ ಇಲಾಖೆಯ ವ್ಯವಸ್ಥಾಪಕ ರುದ್ರಪ್ಪ ಹಾಗೂ ಬೆಂಗಳೂರಿನ ವಿಜಯನಗರದಲ್ಲಿರುವ ಕೇಂಬ್ರಿಡ್ಜ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕಮ್‌ ಎಲ್‌ಐಸಿ ಏಜೆಂಟ್‌ ಮಂಜುನಾಥ್‌ ಸೋಮವಾರ ಬಂಧಿಸಿದೆ.

ಓಬಳೇಶ್‌ ರುದ್ರಪ್ಪರನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಪ್ರಶ್ನೆ ಪತ್ರಿಕೆಯ ಡೀಲನ್ನು 10 ಲಕ್ಷ ರೂಪಾಯಿಗೆ ಮಾಡಿದ್ದರು ಎಂದು ಮಾದ್ಯಮಗಳು ವರದಿ ಮಾಡಿವೆ.

ಬಂಧಿತ ಮೂವರು ಆರೋಪಿಗಳನ್ನು ಮಂಗಳವಾರ ಬೆಂಗಳೂರಿನ 7 ನೇ ಎಸಿಎಂಎಂ ನ್ಯಾಯಲಯಕ್ಕೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಯ ಯ ಸಲುವಾಗಿ ಎಪ್ರಿಲ್‌ 13 ರವರೆಗೆ ಸಿಐಡಿ ಪೊಲೀಸರ ವಶಕ್ಕೆ ನೀಡಿದೆ.

ಮಾ.21ರಂದು ಸೋರಿಕೆಯಾಗಿದ್ದ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಈ ಮೂವರನ್ನೂ ಬಂಧಿಸಲಾಗಿದೆ.

ಆರೋಪಿ ಶಿಕ್ಷಕನ ಬ್ಯಾಂಕ್‌ ಖಾತೆಯಲ್ಲಿದ್ದ 10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಸಿಐಡಿ ತನಿಖೆ ಮುಂದುವರೆದಿದೆ.

ಬಂಧಿತ ಆರೋಪಿಗಳು ಬೇರೊಬ್ಬರಿಂದ ಪ್ರಶ್ನೆ ಪತ್ರಿಕೆ ಖರೀದಿಸಿ, ಹಲವಾರು ಮಂದಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈ ಬಂಧಿತರು ಎರಡನೇ ಸ್ತರದಲ್ಲಿ ಕೆಲಸ ಮಾಡಿದ್ದಾರೆ. ಮೊದಲ ಸ್ತರದ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ತನಿಖೆ ಮುಂದುವರೆದಿದೆ.

ಓಬಳರಾಜು ಮತ್ತು ರುದ್ರಪ್ಪ ಅವರ ಮಕ್ಕಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ಹೀಗಾಗಿ ಈ ಇಬ್ಬರು ಸರ್ಕಾರಿ ಅಧಿಕಾರಿಗಳು ದೈಹಿಕ ಶಿಕ್ಷಕ ಮಂಜುನಾಥ್‌ನಿಂದ 10 ಲಕ್ಷ ರೂ. ಗೆ ಪ್ರಶ್ನೆ ಪತ್ರಿಕೆ ಖರೀದಿಸಿದ್ದರು. ಮಂಜುನಾಥ್‌ ಬೇರೊಬ್ಬರಿಂದ 10 ಲಕ್ಷ ರೂ.ಗೆ ಕೊಂಡುಕೊಂಡಿದ್ದ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಆದರೆ ಮಂಜುನಾಥ್‌ನಿಗೆ ಪ್ರಶ್ನೆ ಪತ್ರಿಕೆ ಪೂರೈಸಿದ್ದು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
-ಉದಯವಾಣಿ

Write A Comment