ಕರ್ನಾಟಕ

ರಾಘವೇಶ್ವರಶ್ರೀ ಪ್ರಕರಣ – ಮೇಲ್ಮನವಿಗೆ ಪಟ್ಟು

Pinterest LinkedIn Tumblr

raಬೆಂಗಳೂರು, ಎ.೪: ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪದ ಕುರಿತು ಸೆಷನ್ಸ್ ನ್ಯಾಯಾಲಯ ನೀಡಿರುವ ಆದೇಶ ಆಘಾತಕಾರಿಯಾಗಿದೆ. ಸಮಗ್ರ ವಿಚಾರಣೆ ಇಲ್ಲದೆ ನೀಡಲಾದ ಈ ಆದೇಶದ ಮರುಪರಿಶೀಲನೆ ಹಾಗೂ ಸಮಗ್ರ ವಿಚಾರಣೆಯನ್ನು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಇಂದಿಲ್ಲಿ ಒತ್ತಾಯಿಸಿವೆ.
ಸಂತ್ರಸ್ತೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಮಗಳಿಗೆ ಹೇಳಿದಾಗ, ಮಗಳು ವಿರೋಧಿಸಲಿಲ್ಲವೆಂದರೆ, ಇದು ಕುಟುಂಬದ ಸಮ್ಮತಿಯಿಂದ ನಡೆದಿರುವ ಅನೈತಿಕ ಸಂಬಂಧ ಎಂಬ ನ್ಯಾಯಾಲಯದ ಹೇಳಿಕೆ ಆಘಾತವನ್ನುಂಟು ಮಾಡಿದೆ. ಆದೇಶದಲ್ಲಿ ದೂರುದಾರರನ್ನೇ ತಪ್ಪಿತಸ್ಥರೆಂದು ಅಭಿಪ್ರಾಯಪಡುತ್ತಾ ಆರೋಪಿಯ ಬಗ್ಗೆ ಮೌನತಾಳಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸಂತ್ರಸ್ತೆ ಕೊಟ್ಟ ದೂರಿನ ಮತ್ತು ದೋಷಾರೋಪಣಾ ಪಟ್ಟಿಯ ಆಧಾರದಲ್ಲಿ ಇದು ಅತ್ಯಾಚಾರವಲ್ಲ, ಬದಲಿಗೆ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಪರ್ಕ ಎಂದು ಬೇಕಾದರೂ ಹೇಳಬಹುದು ಎಂಬ ತೀರ್ಪು ನೀಡಿರುವುದು ಸಂಶಯಗಳಿಗೆ ಎಡೆಮಾಡಿದೆ ಎಂದು ಜನವಾದಿ ಮಹಿಳಾ ಸಂಘದ ಮುಖ್ಯಸ್ಥೆ ವಿಮಲಾ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಐಪಿಸಿ ೪೯೭ರ ಪ್ರಕಾರ ಅಡಲ್ಟ್ರಿ ಕೂಡ ಶಿಕ್ಷಾರ್ಹ ಅಪರಾಧ. ಅಲ್ಲದೆ ಸಿಆರ್‌ಪಿಸಿ ೨೨೭ ಕೂಡ ಮಹಿಳೆಯ ಅನುಮತಿಯನ್ನು ಬಲವಂತ, ಭಯ ಅಥವಾ ಹಿಂಸೆಯ ಮೂಲಕ ಪಡೆದುಕೊಂಡಿದ್ದರೆ ಅದೂ ಅತ್ಯಾಚಾರವೇ ಆಗುತ್ತದೆ. ಇವುಗಳ ಆಧಾರದಲ್ಲಿ ಆರೋಪಿ ಖುಲಾಸೆಗೆ ಅರ್ಹರೇ ಅಲ್ಲ ಎಂದು ಅವರು ಹೇಳಿದರು.
ದೋಷಾರೋಪ ಪಟ್ಟಿಯಲ್ಲಿ ಐಪಿಸಿ ೫೦೮ನ್ನು ಉಲ್ಲೇಖಿಸಲಾಗಿದೆ. ದೂರಿನಲ್ಲಿ ಈ ಕಲಂನಡಿ ಬರುವ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಆದರೆ ನ್ಯಾಯಾಲದ ಖುಲಾಸೆ ತೀರ್ಪಿನಲ್ಲಿ ಎಲ್ಲಿಯೂ ಈ ವಿಷಯ ಪ್ರಸ್ತಾಪಿಸದಿರುವುದು ಹಲವು ಸಂದೇಹಗಳನ್ನು ಉಂಟುಮಾಡಿದೆ.
ಅತ್ಯಾಚಾರದಂತಹ ಸಂದರ್ಭದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದೂ ಹಿಂದಿನ ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಹೇಳಿವೆ. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸು ಮತ್ತು ಐಪಿಸಿ ಸೆಕ್ಷನ್ ೩೭೬ ಇವೆರಡೂ ಅತ್ಯಾಚಾರ ಪ್ರಕರಣಗಳನ್ನು ಸಾಧ್ಯವಾದಷ್ಟು ಮಹಿಳಾ ನ್ಯಾಯಾಧೀಶರು ವಿಚಾರಣೆ ನಡೆಸುವಂತೆ ಹೇಳುತ್ತವೆ. ಈ ರೀತಿಯ ಪ್ರಕರಣಗಳಿಗಾಗಿಯೇ ಬೆಂಗಳೂರಿನಲ್ಲಿ ತ್ವರಿತ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಆದರೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯದಲ್ಲಿ ನಡೆಸಲಾಗಿದೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಲು ವಿಫಲವಾಗಿದೆ ಎಂದು ಹೇಳಿದೆ. ಇದಕ್ಕೆ ರಾಜ್ಯ ಸರ್ಕಾರ ತೋರಿದ ಸಡಿಲ ಧೋರಣೆಯೇ ಕಾರಣ. ಈ ಪ್ರಕರಣದ ಇಬ್ಬರು ದೂರುದಾರರು ಮತ್ತು ಅವರ ಪರವಾಗಿ ನಿಂತವರು ರಾಮಚಂದ್ರಾಪುರ ಮಠದ ಕಡೆಯವರಿಂದ ಎದುರಿಸುತ್ತಿರುವ ಕಿರುಕುಳ, ಯಾತನೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕೇವಲ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ಕೇವಲ ಬಾಯಿಯಿಂದ ಮಾತುಗಳನ್ನಾಡುವ ಬದಲು ಸರ್ಕಾರ ತನ್ನ ನಿಜವಾದ ಮಹಿಳಾ ಪರ ಬದ್ಧತೆಯನ್ನು ತೋರಿಬೇಕು ಎಂದು ಅವರು ಒತ್ತಾಯಿಸಿದರು.
ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಿ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ರಾಜ್ಯ ಉಪಾಧ್ಯಕ್ಷ ಚಿಕ್ಕರಾಜು, ಮಾಲಿನಿ ಮೆಸ್ತಾ ಮತ್ತಿತರರು ಹಾಜರಿದ್ದರು.

Write A Comment