ಕರ್ನಾಟಕ

ಮಗನ ಕಣ್ಣು ದಾನ ಮಾಡಿದ ಪೋಷಕರು

Pinterest LinkedIn Tumblr

eye_donateಬೆಂಗಳೂರು, ಮಾ.೨೭: ಗೆಳೆಯನ ಮನೆಯಲ್ಲಿ ರಾತ್ರಿ ಪೂರ್ತಿ ಪಾರ್ಟಿ ಮಾಡಿ ಬೆಳಗ್ಗಿನ ಜಾವ ಬೈಕ್‌ನಲ್ಲಿ ಮನೆಗೆ ಹೋಗುವಾಗ ಎದುರಿನಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿಯೊಡೆದ ಪರಿಣಾಮ ಬೈಕ್ ಸವಾರ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂದೀಪ್ (೨೫) ಸಾವಿಗೀಡಾದ ಯುವಕ. ಒಬ್ಬನೇ ಪುತ್ರನನ್ನು ಕಳೆದುಕೊಂಡ ಪೋಷಕರು ದುಖಃದ ಮಡುವಿನಲ್ಲಿದ್ದಾಗಲೂ ಮಗನ ಎರಡೂ ಕಣ್ಣುಗಳನ್ನು ದಾನ ಮಾಡುವ ಮಾನವೀಯತೆ ಮೆರೆದಿದ್ದಾರೆ.
ಸಂದೀಪ್ ಖಾಸಗಿ ಕಂಪನಿಯೊಂದರಲ್ಲಿ ಡಿಜಿಟಲ್ ಕಲಾಕಾರನಾಗಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಗೆಳೆಯ ಚಿತ್ರ ಎಂಬವರ ಮನೆಯಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ರಾತ್ರಿ ಮೂರು ಗಂಟೆಯವರೆಗೂ ಅಲ್ಲಿ ಮದ್ಯಪಾನ ಮಾಡಿದ್ದ ಗೆಳೆಯರು, ೪ ಗಂಟೆ ಸುಮಾರಿಗೆ ಜಯನಗರದ ಅರವಿಂದ ಸರ್ಕಲ್ ಬಳಿ ಬಂದು ಅಲ್ಲಿ ಮಾತನಾಡುತ್ತಾ ಕುಳಿತಿದ್ದಾರೆ. ೪.೩೦ರ ಸುಮಾರಿಗೆ ಗೆಳೆಯರು ಕಾರಿನಲ್ಲಿ ಹೋದ ಬಳಿಕ ಸಂದೀಪ್ ಯಮಹಾ ಬೈಕ್‌ನಲ್ಲಿ ಜಯನಗರ ೧೮ನೇ ಕ್ರಾಸ್‌ನಲ್ಲಿರುವ ತನ್ನ ಮನೆ ಕಡೆಗೆ ಹೊರಟಿದ್ದಾರೆ. ಸಂದೀಪ್ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗಿದ್ದು, ಎದುರಿನಿಂದ ಕ್ವಾಲಿಸ್ ಕಾರೊಂದು ವೇಗವಾಗಿ ಬಂದು ಡಿಕ್ಕಿಯೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ..
ಸಂದೀಪ್ ಹೆಲ್ಮೆಟ್ ಹಾಕಿದ್ದರೆ ಬದುಕುಳಿಯುತ್ತಿದ್ದ. ಆತನ ಬೈಕ್‌ಗೆ ಕ್ವಾಲಿಸ್ ಕಾರು ಡಿಕ್ಕಿ ಹೊಡೆದಿದೆ ಎಂದು ಆತನ ಸ್ನೇಹಿತರು ಹೇಳುತ್ತಿದ್ದಾರೆ. ಆದರೆ ಬೈಕ್‌ನ ಯಾವುದೇ ಭಾಗದಲ್ಲಿ ಹಾನಿಯಾಗಿರುವುದು ಕಂಡುಬರುತ್ತಿಲ್ಲ. ಸಂದೀಪ್ ವೇಗವಾಗಿ ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿಯೊಡೆದಿರುವ ಸಾಧ್ಯತೆಯೂ ಇರಬಹುದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗೆಳೆಯರ ಮನೆಯಲ್ಲಿ ಪಾರ್ಟಿ ಮಾಡಿರುವುದಾಗಿ ಸಂದೀಪ್ ಗೆಳೆಯರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇತ್ತೀಚೆಗೆ ನಗರದಲ್ಲಿ ಯುವಕರು ರಾತ್ರಿ ಪಾರ್ಟಿ ಮಾಡಿ ಅಪಘಾತಕ್ಕೀಡಾಗುತ್ತಿರುವುದು ಹೆಚ್ಚಾಗುತ್ತಿವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಏಕೈಕ ಮಗನನ್ನು ಕಳೆದುಕೊಂಡ ನೋವಿನಲ್ಲೂ ಆತನ ಎರಡೂ ಕಣ್ಣುಗಳನ್ನು ದಾನ ಮಾಡಿದ ಪೋಷಕರ ದೃಢನಿರ್ಧಾರ ಮೆಚ್ಚಲೇಬೇಕು. ಸಂದೀಪ್ ಹೆಲ್ಮೆಟ್ ಧರಿಸಿದ್ದರೆ ಈ ಸಾವು ಉಂಟಾಗುತ್ತಿರಲಿಲ್ಲ” ಎಂದು ಬಸವನಗುಡಿ ಇನ್ಸ್‌ಪೆಕ್ಟರ್ ರಮರ್‌ಥನ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Write A Comment