ಕರ್ನಾಟಕ

ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ

Pinterest LinkedIn Tumblr

trainಬಳ್ಳಾರಿ, ಮಾ.27:ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಗುಂತಕಲ್ಲು ಸಮೀಪ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣೀಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿದ ಡಕಾಯಿತರ ಗುಂಪೊಂದು ನಗದು ಹಣ, ಬಂಗಾರದ ಒಡವೆ ಇನ್ನಿತರೆ ವಸ್ತುಗಳನ್ನು ದೋಚಿದ ಘಟನೆ ನಿನ್ನೆ ಮಧ್ಯರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲು ಗುಂತಕಲ್ಲು ದಾಟಿದ ನಂತರ ನಿನ್ನೆ ಮಧ್ಯರಾತ್ರಿ 12.30-1 ಗಂಟೆಯ ಸುಮಾರಿಗೆ 8 ರಿಂದ 10 ಜನ ಡಕಾಯತರಿದ್ದ ತಂಡವೊಂದು ಎರಡು ಬೋಗಿಗಳಿಗೆ ತೆರಳಿ ಅಲ್ಲಿದ್ದ ಪ್ರಯಾಣೀಕರನ್ನು ಚಾಕು-ಚೂರಿ ಮತ್ತಿತರೆ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನದ ಒಡವೆ, ನಗದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಗುಂತಕಲ್ಲಿನಿಂದ ಹಂಪಿ ಎಕ್ಸ್ ಪ್ರೆಸ್ ರೈಲು ಗುತ್ತಿಯ ಕಡೆಗೆ ಹೋಗುತ್ತಿದ್ದಾಗ, ರೈಲು ನಿಲ್ದಾಣ ಒಂದರ ಬಳಿ ಕ್ರಾಸಿಂಗ್ ಗೆಂದು ನಿಂತುಕೊಂಡಾಗ ಈ ಘಟನೆ ನಡೆದಿದೆ.
ಅಂದಾಜು 8 ರಿಂದ 10 ಜನರಿದ್ದ ಡಕಾಯಿತರ ತಂಡವು ಹಂಪಿ ಎಕ್ಸ್ ಪ್ರೆಸ್ ರೈಲಿನ ಎಸ್-5 ಮತ್ತು ಎಸ್-4 ಬೋಗಿಗಳಿಗೆ ನುಗ್ಗಿದ್ದಾರೆ.
ಅಲ್ಲಿ ನಿದ್ರೆಯ ಗುಂಗಿನಲ್ಲಿದ್ದ ಪ್ರಯಾಣೀಕರನ್ನು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ ಡಕಾಯಿತರು, ಕೆಲವರ ಬಳಿ ಇದ್ದ ನಗದು ಹಣ, ಚಿನ್ನದಾಭರಣ ಹಾಗೂ ಇತರೆ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿಯುತ್ತಲೇ ಗುಂತಕಲ್ಲು ವಿಭಾಗದ ರೈಲ್ವೇ ಪೊಲೀಸರು, ಹಾಗೂ ಅನಂತಪುರಂ ಜಿಲ್ಲೆಯ ಸಿವಿಲ್ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಡಾಯಿತ ನಡೆಸಿದ ಕಳ್ಳರು ಕಗ್ಗತ್ತಲಿನಲ್ಲಿಯೇ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅದೃಷ್ಠವಶಾತ್ ಯಾವುದೇ ಪ್ರಯಾಣೀಕರ ಮೇಲೆ ಹಲ್ಲೆ ನಡೆಸಲಾಗಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

Write A Comment