ವಿಜಯಪುರ,ಮಾ.೨೭- ಟಿಪ್ಪರ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ೨ ವರ್ಷ ವಯಸ್ಸಿನ ಹೆಣ್ಣು ಮಗು ಸೇರಿ ೬ ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ತಾಲೂಕಿನ ಹೊರ್ತಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.
ವಿಜಯಪುರ ನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡುವ ಕೆಲಸಕ್ಕೆಂದು ಮಹಾರಾಷ್ಟ್ರದಿಂದ ಆಗಮಿಸಿದ್ದ ಕೂಲಿ ಕಾರ್ಮಿಕರೆ ಮೃತ ದುರ್ದೈವಿಗಳಾಗಿದ್ದಾರೆ.
ನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲೆಂದು ಮಹಾರಾಷ್ಟ್ರದ ಬೀಡ ಗ್ರಾಮದಿಂದ ಆಗಮಿಸಿದ್ದ ಮುಸ್ತಾಕಿನ್ ಫತ್ರು(೩೦), ಮುಮ್ತಾಜ್ ಮಹೆಬೂಬ ಬೇಗ್(೩೫), ಮೆಹರೂನ್ ಹಕೀಂಬೇಗ್(೪೧), ಡಿಕೆಜೆ ರೋಹಿಂದ ಡಂಬಳೆ(೪೦), ವಿಮಲಾ ರೋಹಿದಾಸ ಡಂಬಳೆ(೬೫) ಮತ್ತು ಎರಡು ವರ್ಷ ವಯಸ್ಸಿನ ಹೆಣ್ಣುಮಗು ಆರೋಹಿ ರೋಹಿನ ದಾಳೆ ಮೃತ ವ್ಯಕ್ತಿಗಳಾಗಿದ್ದಾರೆ.
ಕಬ್ಬು ಕಟಾವು ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಸ್ವಗ್ರಾಮ ಮಹಾರಾಷ್ಟ್ರದ ಬೀಡಗೆ ತೆರಳುತ್ತಿದ್ದಾಗ ಹೊರ್ತಿ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಮುಸ್ತಾಕಿನ್, ಮುಮ್ತಾಜ್, ಮೆಹರೂನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಡಿಕೆಜೆ ರೋಹಿಂದ, ವಿಮಲಾ ಮತ್ತು ಆರೋಹಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ೧೫ ಜನ ಕೂಲಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಎನ್.ಎಸ್.ಪಾಟೀಲ್ ತಿಳಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ಮೃತ ವ್ಯಕ್ತಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಕುಟುಂಬ ವರ್ಗದವರು ಎದೆ ಬಡಿದುಕೊಂಡು ರೋಧಿಸುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿತ್ತು.
ಅಪಘಾತದ ಪರಿಣಾಮ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರ ಗುಂಪು ಚದುರಿಸಿ, ರಕ್ಷಣಾ ಕಾರ್ಯ ನಡೆಸಿದರು. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕರ್ನಾಟಕ