ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಈ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪರೀಕ್ಷೆ ಇದೇ ತಿಂಗಳ 30ರಿಂದ ಆರಂಭವಾಗಲಿದೆ.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಶಿಕ್ಷಣ ಇಲಾಖೆ ಜೊತೆಗೆ ಬೇರೆಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳುವುದನ್ನು ಇದೇ ಮೊದಲ ಸಲ ಕಡ್ಡಾಯ ಮಾಡಲಾಗಿದೆ.
ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು ಇದಕ್ಕಾಗಿ ತಲಾ ₹ 20 ಲಕ್ಷ ಒದಗಿಸಲಾಗಿದೆ.
ಈ ಹಿಂದೆ ಸಂಚಾರಿ ತಪಾಸಣಾ ದಳ ಮತ್ತು ಸ್ಥಳೀಯ ತಪಾಸಣಾ ದಳದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಇರುತ್ತಿದ್ದರು. ಅಲ್ಲಲ್ಲಿ ಕೊರತೆ ಕಂಡುಬಂದರೆ ಮಾತ್ರ ಇತರೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ಈ ಸಲ ಎಲ್ಲ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ತಪಾಸಣೆಯಲ್ಲಿ ಪಾಲ್ಗೊಳ್ಳಲೇ ಬೇಕಾಗುತ್ತದೆ.
ಯಾವ ಅಧಿಕಾರಿಗಳು?: ವೈದ್ಯಾಧಿಕಾರಿಗಳನ್ನು ಹೊರತು ಪಡಿಸಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಯ ತಾಲೂಕಾ ಮಟ್ಟದ ಗೆಜೆಟೆಡ್ ಅಧಿಕಾರಿಗಳನ್ನು ಸಂಚಾರಿ ತಪಾಸಣಾ ದಳಕ್ಕೆ ನೇಮಿಸಲಾಗುತ್ತದೆ.
ಪ್ರತಿಯೊಂದು ಅಧಿಕಾರಿಗಳ ತಂಡಕ್ಕೆ 6 ರಿಂದ 8 ಪರೀಕ್ಷಾ ಕೇಂದ್ರಗಳ ಜವಾಬ್ದಾರಿ ವಹಿಸಲಾಗುತ್ತದೆ. ಅವರು ಈ ಎಲ್ಲ ಕೇಂದ್ರಗಳಿಗೂ ಭೇಟಿ ನೀಡಬೇಕು. ಕೇಂದ್ರದ ಸುತ್ತಮುತ್ತ ಪರೀಕ್ಷಾ ಅಕ್ರಮಗಳು ನಡೆಯುತ್ತಿದ್ದರೆ ತಡೆಯಬೇಕು. ಸಿಸಿಟಿವಿ ಕ್ಯಾಮೆರಾ, ಪೊಲೀಸ್ ಭದ್ರತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಬೇಕು.
ರಹಸ್ಯ ಪಾಲನೆ: ಒಬ್ಬ ಅಧಿಕಾರಿಗೆ ಯಾವ ಯಾವ ಕೇಂದ್ರಗಳನ್ನು ವಹಿಸಲಾಗುತ್ತದೆ ಎಂಬುದನ್ನು ಮೊದಲೇ ತಿಳಿಸುವುದಿಲ್ಲ. ಪರೀಕ್ಷಾ ದಿನದಂದು ಬೆಳಿಗ್ಗೆ ಅವರಿಗೆ ವಹಿಸಿರುವ ಕೇಂದ್ರಗಳ ಪಟ್ಟಿ ನೀಡಲಾಗುತ್ತದೆ. ಆ ಪ್ರಕಾರ ಅವರು ನಿಗದಿತ ಮಾರ್ಗದಲ್ಲಿ ಸಂಚರಿಸಿ ತಪಾಸಣೆ ನಡೆಸಿ ವರದಿ ನೀಡಬೇಕು.
‘ಅಕ್ರಮಗಳು ನಡೆದ ನಂತರ ಕೆಲವರ ವಿರುದ್ಧ ಕ್ರಮ ಕೈಗೊಂಡರೆ ಜವಾಬ್ದಾರಿ ಮುಗಿಯದು. ಅದಕ್ಕಾಗಿ ಅಕ್ರಮಗಳೇ ನಡೆಯದಂತೆ ಈ ಬಾರಿ ಕೆಲ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್. ಸತ್ಯಮೂರ್ತಿ ತಿಳಿಸಿದರು.
ಪರೀಕ್ಷೆ ವೇಳೆ ಅಡಚಣೆರಹಿತ ವಿದ್ಯುತ್ ಪೂರೈಕೆಗೆ ಆದೇಶ
ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೆಳಿಗ್ಗೆ ಮತ್ತು ಸಂಜೆ 6 ರಿಂದ 9ರ ವರೆಗೆ ಅಡಚಣೆ ರಹಿತ ವಿದ್ಯುತ್ ಪೂರೈಸಲು ಸೂಚಿಸಲಾಗಿದೆ.
‘ಪರೀಕ್ಷಾರ್ಥಿಗಳ ಅಭ್ಯಾಸಕ್ಕೆ ಅನುಕೂಲ ಆಗುವಂತೆ ಯಾವುದೇ ಕಡಿತ ಮಾಡದೆ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಎಲ್ಲ ಐದು ವಿದ್ಯುತ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಶನಿವಾರ ಆದೇಶಿಸಿದ್ದಾರೆ.
* ಚುನಾವಣೆಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯೋ ಅದೇ ಮಾದರಿಯನ್ನು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಭದ್ರತೆ ಮತ್ತು ತಪಾಸಣೆಗೂ ಅಳವಡಿಸಿಕೊಳ್ಳಲಾಗಿದೆ
ಕೆ.ಎಸ್.ಸತ್ಯಮೂರ್ತಿ
ಸಾರ್ವಜನಿಕ ಶಿಕ್ಷಣ ಆಯುಕ್ತ
ಅಂಕಿ ಅಂಶ
* 8.54 ಲಕ್ಷ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು
* 3,092 ಪರೀಕ್ಷಾ ಕೇಂದ್ರಗಳು
* 1 ಲಕ್ಷಕ್ಕೂ ಅಧಿಕ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ
ಮುಖ್ಯಾಂಶಗಳು
* ತಪಾಸಣಾ ದಳಗಳಿಗೆ ವಿವಿಧ ಇಲಾಖೆ ಅಧಿಕಾರಿಗಳ ಬಳಕೆ
* ಜಿಲ್ಲಾಧಿಕಾರಿಗೆ ಪೂರ್ಣ ಹೊಣೆ
* ಜಿಲ್ಲೆಗೆ ತಲಾ ₹ 20 ಲಕ್ಷ
ಕರ್ನಾಟಕ