ಕರ್ನಾಟಕ

ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಪರೋಪಕಾರಿಗಳಿಗೆ ಜೀವರಕ್ಷಕ ಪ್ರಶಸ್ತಿ: ಸಚಿವ ಯು.ಟಿ.ಖಾದರ್

Pinterest LinkedIn Tumblr

kha

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುವವರನ್ನು ಗುರುತಿಸಿ ಅವರಿಗೆ `ಜೀವರಕ್ಷಕ’ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಲೇಡಿ ವಿಲ್ಲಿಂಗ್ಟನ್ ರಾಜ್ಯ ಕ್ಷಯ ರೋಗ ಕೇಂದ್ರ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಉತ್ತೇಜಿಸುವ ಉದ್ದೇಶದಿಂದ ವಾರ್ಷಿಕವಾಗಿ ಈ ಪ್ರಶಸ್ತಿ ನೀ‌ಡಲು ನಿರ್ಧರಿಸಲಾಗಿದೆ.

ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಸಾರ್ವಜನಿಕರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು, ಪ್ರಶಸ್ತಿಯ ರೂಪುರೇಷೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇದನ್ನು ಪ್ರತಿವರ್ಷವೂ ನೀ‌ಡುವ ಉದ್ದೇಶ ಇದೆ ಎಂದು ಹೇಳಿದರು.

ಗುಲ್ಬರ್ಗ ಪ್ರಕರಣ ಮೂರು ದಿನಗಳಲ್ಲಿ ವರದಿ
ಗುಲ್ಬರ್ಗಾದ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡ ಉಂಟಾದ ಪ್ರಕರಣದ ಬಗ್ಗೆ ಮೂರು ದಿನದಲ್ಲಿ ವರದಿ ನೀ‌ಡುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಬೆಂಕಿ ಅವಘಡ ಸಂದರ್ಭದಲ್ಲಿ ಅಗ್ನಿಶಾಮಕ ದಳ ಹಾಗೂ ಆಸ್ಪತ್ರೆಯ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆಯನ್ನು ಪ್ರಶಂಸಿಸಿದ ಆರೋಗ್ಯ ಸಚಿವರು ಶೀಘ್ರವೇ ಇವರಿಗೆ ಬೆಂಗಳೂರಿನಲ್ಲಿ ಗೌರವ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಮಾತ್ರವಲ್ಲ ಆಸ್ಪತ್ರೆಯಲ್ಲಿದ್ದ ಎಲ್ಲ ನವಜಾತ ಶಿಶುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರೆಲ್ಲರಿಗೂ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಮಾರಂಭದಲ್ಲಿ ಮಾತನಾಡಿದ ಯು.ಟಿ ಖಾದರ್, ಕ್ಷಯ ರೋಗದ ಬಗ್ಗೆ ಜನಜಾಗೃತಿ ಮೂಡಿಸಿದರೆ ಈ ರೋಗವನ್ನು ಶೂನ್ಯಕ್ಕೆ ಇಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಯಾವುದೇ ರೋಗವನ್ನು ಜನ ಜಾಗೃತಿಯ ಮೂಲಕ ಕಡಿಮೆ ಮಾಡಲು ಸಾಧ್ಯವಿದೆ. ಕ್ಷಯ ರೋಗ ಬಂದಾಗ ಈ ಹಿಂದೆ ಜನರು ಭಯಭೀತರಾಗುತ್ತಿದ್ದರು. ಆದರೆ ಈಗ ಈ ರೋಗಕ್ಕೆ ಚಿಕಿತ್ಸೆ ಇರುವುದರಿಂದ ಜನರಲ್ಲಿ ವಿಶ್ವಾಸ ಮೂಡಿದೆ.
ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಹಾಗಾದರೆ ಮಾತ್ರ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ. ಎಂ, ಚಿತ್ರನಟ ವಿಜಯರಾಘವೇಂದ್ರ, ನಟಿ ಸಂಜನಾ, ಸಂಸದೀಯ ಕಾರ್ಯದರ್ಶಿ ಡಾ. ಉಮೇಶ್ ಜಾದವ್, ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ. ವಿಮಲಾ ಆರ್. ಪಾಟೀಲ್, ಡಾ. ಆರ್.ಎನ್. ಪಾಟೀಲ್, ಜಪಾನಂದ ಸ್ವಾಮೀಜಿ, ಆದರ್ಶ್, ನೀರಜ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment