ಕರ್ನಾಟಕ

ಪಿಯುಸಿ ಆಯ್ತು ಈಗ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ? ಬಿಇಒ ಅಮಾನತು

Pinterest LinkedIn Tumblr

exam-papers-1

ವಿಜಯಪುರ: ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಯಾಗಿ ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಈಗ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವೆಂಬಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಸರ್ಕಾರಿ ವಾಹನ ಮೂಲಕ ಖಜಾನೆ ಇಲಾಖೆಗೆ ಸಾಗಿಸುವ ಬದಲು ಕಾನೂನು ಬಾಹಿರವಾಗಿ ಖಾಸಗಿ ಶಿಕ್ಷಣ ಸಂಸ್ಥೆಯ ವಾಹನದಲ್ಲಿ ಸಾಗಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.

ಪ್ರಶ್ನೆ ಪತ್ರಿಕೆಯನ್ನು ನಿಯಮಾನುಸಾರ ಸಾಗಾಟ ಮಾಡದೆ, ಖಾಸಗಿ ಶಾಲೆಯ ವಾಹನದಲ್ಲಿ ಸಾಗಿಸಿದ್ದಕ್ಕಾಗಿ ಕರ್ತವ್ಯಲೋಪ ಆರೋಪದ ಮೇಲೆ ಮುದ್ದೇಬಿಹಾಳ ಬಿಇಒ ಎನ್.ವಿ. ಹೊಸೂರ್ ಅವರನ್ನು ಅಮಾನತು ಮಾಡಲಾಗಿದೆ.

ಬಿಇಒ ಹೊಸೂರ್ ಅವರು ಪೊಲೀಸರು ಹಾಗೂ ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ಸರ್ಕಾರಿ ವಾಹನದಲ್ಲಿ ಪ್ರಶ್ನೆ ಪತ್ರಿಕೆ ಸಾಗಿಸಬೇಕಿತ್ತು. ಆದರೆ ಖಾಸಗಿ ಶಾಲಾ ಸಂಸ್ಥೆಯ ಬಸ್ ನಲ್ಲಿ ಸಾಗಿಸಿ ಸಿಕ್ಕಿ ಬಿದಿದ್ದಾರೆ.
ವಿಷಯ ತಿಳಿದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಅವರು ಕೂಡಲೇ ಬಿಇಒ ಹೊಸೂರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಯಶೋಧಾ, ಬಿಇಒ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಯಾಗಿಲ್ಲ. ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಇದೇ ತಿಂಗಳು 30 ರಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ ವಿಜಯಪುರದಿಂದ ಮುದ್ದೇಬಿಹಾಳಕ್ಕೆ ಪ್ರಶ್ನೆ ಪತ್ರಿಕೆಗಳ ಬಂಡಲ್‌‌ಗಳು ಸಾಗಾಣೆಯಾಗುತ್ತಿದ್ದವು. ಈ ವೇಳೆ ಮಾರ್ಗ ಮಧ್ಯೆ ಬಿಇಒ ಎನ್. ವಿ. ಹೊಸೂರು ಅವರು ವಾಹನದಿಂದ ಕೆಳಗಿಳಿದಿದ್ದಾರೆ. ಇದರಿಂದ ಪ್ರಶ್ನೆ ಪತ್ರಿಕೆಗಳು ಲೀಕ್‌ ಆಗಿವೆ ಎನ್ನಲಾಗಿದೆ.

Write A Comment