ಕರ್ನಾಟಕ

ಕಡೂರಿಗೆ ಕರೆಂಟ್ ಕಾಟ ಶಾಸಕರ ರಾಜೀನಾಮೆ ಆಟ

Pinterest LinkedIn Tumblr

Holi-1ಬೆಂಗಳೂರು, ಮಾ. ೨೪- ಕಡೂರು ವಿಧಾನಸಭಾ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನಕೊಡದ ಧೋರಣೆಯಿಂದ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ. ದತ್ತ ಅವರು ಮುಂದಾದ ಅಪರೂಪದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಬರ ಹಾಗೂ ವಿದ್ಯುತ್ ಸಮಸ್ಯೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ತೀರಾ ಭಾವುಕರಾದಂತೆ ಕಂಡು ಬಂದ ಅವರು, ತಾವು ಸಿದ್ಧ ಮಾಡಿಕೊಂಡು ತಂದಿದ್ದ ರಾಜೀನಾಮೆ ಪತ್ರವನ್ನು ಓದಲು ಮುಂದಾದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ದತ್ತ ಅವರು ರಾಜೀನಾಮೆ ಪತ್ರ ಓದುವುದಕ್ಕೆ ತಡೆಯೊಡ್ಡಿ ನಿಮ್ಮ ಸಮಸ್ಯೆ ಏನೆಂದು ಹೇಳಿ. ಸರ್ಕಾರದಿಂದ ಏನಾಗಬೇಕು. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ಹೇಗೆ ಎಂಬುದನ್ನು ಹೇಳಿ ಎಂದು ಸಲಹೆ ಮಾಡಿದರು.
ದತ್ತ ಅವರು ಪದೇ ಪದೇ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾದರೂ ಸಭಾಧ್ಯಕ್ಷರು ನಿರ್ದಿಷ್ಟವಾಗಿ ಸಮಸ್ಯೆ ಏನು, ಪರಿಹಾರ ಏನು ಹೇಳಿ ಎಂದು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು
ಇದಕ್ಕೂ ಮುನ್ನ ಮಾತನಾಡಿದ ದತ್ತ ಅವರು, ಕಡೂರು ಕ್ಷೇತ್ರದ ವ್ಯಾಪ್ತಿಯ ಮಂಚೇನಹಳ್ಳಿ ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿದೆ. ಹಿರಿಯೂರಿನಿಂದ ನಮಗೆ ಬರಬೇಕಾದಂತಹ ವಿದ್ಯುತ್‌ನ್ನು ಹೊಸದುರ್ಗಕ್ಕೆ ಡೈವರ್ಟ್ ಮಾಡಲಾಗುತ್ತಿದೆ. ನನ್ನ ಪಕ್ಕದ ಕ್ಷೇತ್ರದ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ನಾನು ಜೆಡಿಎಸ್ ತಮಗೆ ಕೆಟ್ಟ ಹೆಸರು ಬರಲಿ ಎಂದೇ ಈ ರೀತಿ ನಮ್ಮ ಭಾಗಕ್ಕೆ ಬರುವ ವಿದ್ಯುತ್‌ನ್ನು ಬೇರೆಡೆಗೆ ವರ್ಗಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಜನರು ನನ್ನನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದಾರೆ. ಮೊಬೈಲ್‌ ಮೇಸೆಜ್‌ಗಳನ್ನು ಕಳುಹಿಸುತ್ತಿದ್ದಾರೆ. ಇದನ್ನು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಾನೊಬ್ಬ ಸೂಕ್ಷ್ಮಜೀವಿ ಅದಕ್ಕೆಂದೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದೇನೆ ಎಂದು ಅವರು ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು.
ನನ್ನ ಕ್ಷೇತ್ರದ ಪಂಚೇನಹಳ್ಳಿ ಭಾಗ ಬೆಸ್ಕಾಂ ವ್ಯಾಪ್ತಿಗೆ ಬಂದರೆ, ಕ್ಷೇತ್ರದ ಉಳಿದ ಭಾಗ ಮೆಸ್ಕಾಂ ಬರುತ್ತದೆ. ಈ ಎರಡೂ ಕಂಪೆನಿಗಳ ಮುಖಾಂತರ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು.

Write A Comment