ಕರ್ನಾಟಕ

ಉಷ್ಣಾಂಶ ಏರಿದರೆ 30 ಟಿಎಂಸಿ ನೀರು ಆವಿ

Pinterest LinkedIn Tumblr

uಬೆಂಗಳೂರು: ‘ರಾಜ್ಯದಲ್ಲಿ ಉಷ್ಣಾಂಶ ಹೀಗೆಯೇ ಏರಿಕೆಯಾದರೆ ಮುಂದಿನ ಮೂರು ತಿಂಗಳಲ್ಲಿ ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ 30 ಟಿಎಂಸಿ ನೀರು ಆವಿಯಾಗುತ್ತದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಹೇಳಿದರು.
ಕೇಂದ್ರೀಯ ಅಂತರ್ಜಲ ಮಂಡಳಿಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರ್ಜಲ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಷ್ಣಾಂಶದಲ್ಲಿ 2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ. ಸದ್ಯ ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ 60 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈಗಿನ ತಾಪಮಾನದಿಂದ ಪ್ರತಿ ದಿನ 6– 7 ಮಿ.ಮೀ ನೀರು ಆವಿಯಾಗುತ್ತಿದೆ’ ಎಂದರು.
‘ಮಲೆನಾಡಿನಲ್ಲಿ ಜೂನ್‌, ಜುಲೈ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಶೇಕಡಾ 80 ರಷ್ಟು ಮಳೆಯಾಗುತ್ತದೆ. ಆದರೆ, ಕಳೆದ ಜುಲೈನಲ್ಲಿ ವಾಡಿಕೆಯಷ್ಟು ಮಳೆಯಾಗಲಿಲ್ಲ. ಇದರಿಂದಾಗಿ ಜಲಾಶಯಗಳು ಭರ್ತಿಯಾಗಲಿಲ್ಲ’ ಎಂದರು.
‘ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ಪ್ರಮಾಣದ ಮಳೆಯಾಗುತ್ತದೆ. ಈ ರೀತಿ ಮಳೆ ಹಂಚಿಕೆಯಲ್ಲಿ ಉಂಟಾಗುವ ವ್ಯತ್ಯಾಸ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ’ ಎಂದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಅಯುಕ್ತ ಎಚ್.ಜಿ.ಶಿವಾನಂದಮೂರ್ತಿ ಮಾತನಾಡಿ, ‘ವೈಜ್ಞಾನಿಕ ರೀತಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಲು ಜನರು ಮುಂದಾಗಬೇಕು’ಎಂದು ಹೇಳಿದರು.
‘ಪ್ರಸ್ತುತ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಅಲ್ಪ–ಸ್ವಲ್ಪ ನೀರು ಸಿಕ್ಕರೂ ಅದರಲ್ಲಿ ಫ್ಲೋರೈಡ್‌ ಅಂಶ ಇರುತ್ತದೆ. ಈ ನೀರನ್ನು ಕುಡಿದರೆ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತದೆ. ಕೃಷಿಗೆ ಬಳಸಿದರೆ ಮಣ್ಣಿನ ಸಂರಚನೆ ಹಾಳಾಗುತ್ತದೆ’ ಎಂದರು.
‘ವಿಶ್ವದಲ್ಲಿ ಒಟ್ಟು ಲಭ್ಯವಿರುವ ನೀರಿನಲ್ಲಿ ಶೇಕಡಾ 2.5ರಷ್ಟು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಶೇಕಡಾ 0.75 ಮಾತ್ರ ಅಂತರ್ಜಲ ಇದೆ. ಜಲಮೂಲಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜೀವ ಸಂಕುಲ ನಶಿಸಿ ಹೋಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.
‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ 70ರಷ್ಟು ನೀರನ್ನು ಕೃಷಿಗೆ ಬಳಸಲಾಗುತ್ತಿದೆ. ಈ ನೀರನ್ನು ಅಂತರ್ಜಲದಿಂದ ಪಡೆಯಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇಕಡಾ 30 ರಷ್ಟು ನೀರನ್ನು ಮಾತ್ರ ಕೃಷಿಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಕಡಿಮೆ ಅಂತರ್ಜಲವನ್ನು ಬಳಸಿ ಕೃಷಿ ಮಾಡಲು ಮುಂದಾಗಬೇಕು. ಮಳೆ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಕೃಷಿ ಹೊಂಡಗಳ ಮೂಲಕ ಅದನ್ನು ಸಂಗ್ರಹಿಸಿ ಕೃಷಿಗೆ ಬಳಸಬೇಕು. ಇಂಗು ಗುಂಡಿಗಳ ಮೂಲಕ ನೀರನ್ನು ಇಂಗಿಸಬೇಕು’ ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಶಿವಣ್ಣ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಲಕ್ಷಾಮವನ್ನು ಎದುರಿಸಬೇಕಾಗುತ್ತದೆ’ ಎಂದರು.

Write A Comment