ರಾಷ್ಟ್ರೀಯ

ದೇಸಿ ಓಕುಳಿಗೆ ಚೀನಾ ರಂಗು!

Pinterest LinkedIn Tumblr

Holi16ಲಖನೌ (ಪಿಟಿಐ): ಈ ಬಾರಿಯ ಹೋಳಿ ಹಬ್ಬದಲ್ಲಿ ಬಹುತೇಕ ಭಾರತೀಯರ ಮುಖ ಮತ್ತು ಮೈಗಳನ್ನು ದೇಶೀಯ ಬಣ್ಣದ ಬದಲಾಗಿ ಚೀನಾದ ಬಣ್ಣ ಮೆತ್ತಿಕೊಳ್ಳಲಿದೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಚೀನಾದಲ್ಲಿ ತಯಾರಿಸಿದ ಬಣ್ಣಗಳು ಭಾರಿ ಭರಾಟೆಯಿಂದ ಬಿಕರಿಯಾಗುತ್ತಿವೆ.
ನೆರೆಯ ರಾಷ್ಟ್ರದ ಸರಕಿನಿಂದಾಗಿ ಸ್ಥಳೀಯ ಬಣ್ಣಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದ ದೇಶೀಯ ಬಣ್ಣ ತಯಾರಿಕಾ ಮಾರುಕಟ್ಟೆ ನಷ್ಟದ ಭೀತಿ ಎದುರಿಸುತ್ತಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಮೀಕ್ಷೆ ಹೇಳಿದೆ.
ಸ್ಥಳೀಯ ಬಣ್ಣಗಳ ಬೆಲೆಗೆ ಹೋಲಿಸಿದರೆ ಚೀನಾದ ಬಣ್ಣಗಳು ಅರ್ಧದಷ್ಟು ಅಗ್ಗವಾಗಿವೆ. ಬಣ್ಣ ಎರಚುವ ಪಿಚಕಾರಿ ಹಾಗೂ ಇನ್ನಿತರ ಆಟಿಕೆಗಳೂ ಆಕರ್ಷಕವಾಗಿದ್ದು ಹೊಸತನದಿಂದ ಕೂಡಿವೆ.
ಕೇಂದ್ರ ಸರ್ಕಾರದ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯ ಹೊರತಾಗಿಯೂ ಬಣ್ಣ ತಯಾರಿಸುವ ಸಣ್ಣ ಕೈಗಾರಿಕೆಗಳು ಈ ಬಾರಿ ಶೇ 75ರಷ್ಟು ನಷ್ಟ ಎದುರಿಸುವಂತಾಗಿದೆ. ಸ್ಥಳೀಯ ಬಣ್ಣಗಳ ಮಾರುಕಟ್ಟೆ ಶೇ 25ಕ್ಕೆ ಕುಸಿದಿದೆ.
ಚೀನಾದ ಆಕರ್ಷಕ ಹಾಗೂ ವಿನೂತನ ಆಟಿಕೆಗಳಿಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಸ್ಥಳೀಯ ಪಿಚಕಾರಿಗಳನ್ನು ಯಾರೂ ಕೇಳುತ್ತಿಲ್ಲ ಎಂದು 250ಕ್ಕೂ ಹೆಚ್ಚು ವರ್ತಕರು, ವಿತರಕರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಐದು ಸಾವಿರಕ್ಕೂ ಹೆಚ್ಚು ಬಣ್ಣ ತಯಾರಿಕಾ ಘಟಕಗಳು ಹೋಳಿ ಹಬ್ಬದ ಸಮಯದಲ್ಲಿ ಐದು ಲಕ್ಷ ಕೆ.ಜಿ. ಬಣ್ಣವನ್ನು ತಯಾರಿಸುತ್ತಿದ್ದವು. ಆ ಪೈಕಿ ಎರಡು ಲಕ್ಷ ಕೆ.ಜಿ. ಉತ್ತರ ಪ್ರದೇಶವೊಂದರಲ್ಲಿಯೇ ಮಾರಾಟವಾಗುತ್ತಿದೆ.

Write A Comment