ರಾಷ್ಟ್ರೀಯ

ಮಲ್ಯ ವಿಲಾಸಿ ವಿಮಾನ ಹರಾಜಿಗೆ ನಿರ್ಧಾರ

Pinterest LinkedIn Tumblr

VMallyaನವದೆಹಲಿ: ಉದ್ಯಮಿ ವಿಜಯ್‌ ಮಲ್ಯ ಅವರು ಸ್ವಂತದ ಪ್ರಯಾಣಕ್ಕೆ ಬಳಸುತ್ತಿದ್ದ ವಿಲಾಸಿ ವಿಮಾನವನ್ನು ಹರಾಜು ಹಾಕಲು ಸೇವಾ ತೆರಿಗೆ ಇಲಾಖೆಯು ಮುಂದಾಗಿದೆ.
ಸದ್ಯಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಿಂದ ಬಾಕಿ ವಸೂಲಿ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಮೇ ತಿಂಗಳ 12 ಮತ್ತು 13ರಂದು, 25 ಸೀಟುಗಳ ಏರ್‌ಬಸ್‌ (ಎ319–133ಸಿಜವಿಟಿ –ವಿಜೆಎಂ ಎಂಎಸ್‌ಎನ್‌ 2650) ಅನ್ನು ಇ–ಹರಾಜು ಹಾಕಲಾಗುವುದು. ಮುಂಬೈ ವಿಮಾನ ನಿಲ್ದಾಣದಲ್ಲಿ ಇರುವ ಈ ಕಾರ್ಪೊರೇಟ್‌ ಜೆಟ್‌ ಅನ್ನು ಆಸಕ್ತ ಖರೀದಿದಾರರು ಏಪ್ರಿಲ್‌ 2 ರಿಂದ ಮೇ 10ರವರೆಗೆ ಪರಿಶೀಲಿಸಬಹುದಾಗಿದೆ.
ಹರಾಜು ಪ್ರಕ್ರಿಯೆಯಲ್ಲಿ ಪರಿಣತಿ ಹೊಂದಿರುವ ‘ಮಿನಿ ರತ್ನ’ ಖ್ಯಾತಿಯ ಕೇಂದ್ರೋದ್ಯಮ ಎಂಎಸ್‌ಟಿಸಿ ಲಿಮಿಟೆಡ್‌ ಮೂಲಕ, ಸೇವಾ ತೆರಿಗೆ ಇಲಾಖೆಯು ಈ ವಿಮಾನದ ಹರಾಜು ನಡೆಸಲಿದೆ. ಸಂಸ್ಥೆಯು ಈ ಸಂಬಂಧ ಈಗಾಗಲೇ ಜಾಗತಿಕ ಆನ್‌ಲೈನ್‌ ಹರಾಜು ನೋಟಿಸ್‌ ಜಾರಿ ಮಾಡಿದೆ.
ಈ ಕಾರ್ಪೊರೇಟ್‌ ಜೆಟ್‌ನಲ್ಲಿ 25 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಪ್ರಯಾಣಿಸಬಹುದಾಗಿದೆ. ವಿಮಾನದ ಬಾಹ್ಯ ಮತ್ತು ಆಂತರಿಕ ವಿನ್ಯಾಸವು ತುಂಬ ಆಕರ್ಷಕವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪರಿಣತರ ಪ್ರಕಾರ, ವಿಮಾನಯಾನ ರಂಗದಲ್ಲಿ ಎ319 ಕಾರ್ಪೊರೇಟ್‌ ಜೆಟ್‌ಗಳ ಬೆಲೆಯು ಆಂತರಿಕ ವಿನ್ಯಾಸ ಮತ್ತು ಖರೀದಿದಾರರ ಅಗತ್ಯಕ್ಕೆ ತಕ್ಕಂತೆ ಅಳವಡಿಸಿದ ಸೌಲಭ್ಯಗಳನ್ನು ಆಧರಿಸಿ ₹ 462 ಕೋಟಿಗಳಿಂದ ₹ 594 ಕೋಟಿಗಳವರೆಗೆ ಇದೆ.
ಸೇವಾ ತೆರಿಗೆ ಇಲಾಖೆಯು 2013ರಲ್ಲಿಯೇ ಮಲ್ಯ ಅವರ ವೈಯಕ್ತಿಕ ಬಳಕೆಯ ಜೆಟ್‌, 5 ಎಟಿಆರ್‌ ವಿಮಾನ ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಮಲ್ಯ ಮತ್ತು ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಿಂದ ಬಾಕಿ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಬೇಕು ಎಂದು ಇಲಾಖೆಯು ಈ ತಿಂಗಳ ಆರಂಭದಲ್ಲಿ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಈ ತಿಂಗಳ 28ಕ್ಕೆ ಮುಂದೂಡಿದೆ.
ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗಾಗಿ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದಿದ್ದ ₹ 9,000 ಕೋಟಿ ಸಾಲ ಮರು ಪಾವತಿ ಮಾಡದೆ ‘ಉದ್ದೇಶಪೂರ್ವಕ ಸುಸ್ತಿದಾರ’ರಾಗಿರುವ ಮಲ್ಯ ಅವರು, ಹಠಾತ್ತಾಗಿ ದೇಶ ತೊರೆದು ಇಂಗ್ಲೆಂಡ್‌ಗೆ ತೆರಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸನೋಫಿ ಇಂಡಿಯಾ ಅಧ್ಯಕ್ಷತೆಯಿಂದ ನಿವೃತ್ತಿ
ನವದೆಹಲಿ (ಪಿಟಿಐ ವರದಿ): ಔಷಧಿ ತಯಾರಿಕಾ ಸಂಸ್ಥೆ ಸನೋಫಿ ಇಂಡಿಯಾದ ಅಧ್ಯಕ್ಷ ಹುದ್ದೆಯಿಂದ ತಾವು ನಿವೃತ್ತರಾಗುವುದಾಗಿ ವಿಜಯ್‌ ಮಲ್ಯ ಪ್ರಕಟಿಸಿದ್ದಾರೆ.
ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಯುನೈಟೆಡ್ ಸ್ಪಿರಿಟ್ಸ್‌ನ ಅಧ್ಯಕ್ಷ ಹುದ್ದೆ ತೊರೆದಿದ್ದ ಮಲ್ಯ ಅವರು ಈಗ ಈ ನಿರ್ಧಾರಕ್ಕೆ ಬಂದಿದ್ದಾರೆ. ಸನೋಫಿ ಇಂಡಿಯಾದ ನಿರ್ದೇಶಕರಾಗಿ ಮರು ಆಯ್ಕೆ ಬಯಸುವುದಿಲ್ಲ ಎಂದೂ ತಿಳಿಸಿದ್ದಾರೆ.
ಮಲ್ಯ ಈ ಸಂಸ್ಥೆಯಲ್ಲಿ 32 ವರ್ಷಗಳವರೆಗೆ ಅಧ್ಯಕ್ಷರಾಗಿದ್ದರು. ಒಟ್ಟಾರೆ 42 ವರ್ಷಗಳ ಕಾಲ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Write A Comment