ಅಂತರಾಷ್ಟ್ರೀಯ

ಹೋನರ್ ಹೋಲಿ 2 ಪ್ಲಸ್ ಶಕ್ತಿಶಾಲಿ ಬ್ಯಾಟರಿ ಫೋನ್

Pinterest LinkedIn Tumblr

kbec24Huawe1ಹುವಾವೇ ಕಂಪೆನಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಒಂದು ಪ್ರಮುಖ ಹೆಸರು. ಅದು ಸ್ಮಾರ್ಟ್‌ಫೋನ್ ಕೂಡ ತಯಾರಿಸುತ್ತಿದೆ. ಇತ್ತೀಚೆಗೆ ಅದು ತನ್ನ ಸ್ಮಾರ್ಟ್‌ಫೋನ್ ವಿಭಾಗವನ್ನು ಪ್ರತ್ಯೇಕಿಸಿ ಹೋನರ್ ಹೆಸರಿನಿಂದ ಮಾರುತ್ತಿದೆ. ಹೋನರ್ ಎಲ್ಲ ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ.
ಜನಸಾಮಾನ್ಯರ ಕೈಗೆಟುಕುವ ಬೆಲೆಯ ಸಾಮಾನ್ಯ ಫೋನ್‌ಗಳಿಂದ ಹಿಡಿದು ಸ್ವಲ್ಪ ದುಬಾರಿ ಬೆಲೆಯ ಫೋನ್‌ಗಳ ತನಕ ಅದರ ವ್ಯಾಪ್ತಿ ಹಬ್ಬಿದೆ. ಹೋನರ್ ಹೋಲಿ 2 ಪ್ಲಸ್ (Honor Holly2 Plus) ಸ್ಮಾರ್ಟ್‌ಫೋನ್ ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
1.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, 2+16 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, 5 ಇಂಚು (12.7 ಸೆ.ಮೀ.) ಗಾತ್ರದ ಐಪಿಎಸ್ ಪರದೆ, 720×1280 ಪಿಕ್ಸೆಲ್ ರೆಸೊಲೂಶನ್, 13 ಮೆಗಾಪಿಕ್ಸೆಲ್ (f/2.0) ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್ (f/2.2) ಸ್ವಂತೀ ಕ್ಯಾಮೆರಾಗಳು, ಪ್ರಾಥಮಿಕ ಕ್ಯಾಮೆರಾಕ್ಕೆ ಎಲ್‌ಇಡಿ ಫ್ಲಾಶ್, ಎರಡು ಮೈಕ್ರೋಸಿಮ್, 2ಜಿ/3ಜಿ/4ಜಿ, 143.1 x 71.8 x 9.7 ಮಿ.ಮೀ. ಗಾತ್ರ, 160 ಗ್ರಾಂ ತೂಕ, ಬ್ಲೂಟೂತ್, ವೈಫೈ, ಜಿಪಿಎಸ್, ಎಫ್.ಎಂ ರೇಡಿಯೊ, 4000 mAh ಶಕ್ತಿಯ ಬ್ಯಾಟರಿ, ಆಂಡ್ರಾಯ್ಡ್‌ 5.1, ಇತ್ಯಾದಿ. ಯುಎಸ್‌ಬಿ ಓಟಿಜಿ ಸವಲತ್ತು ಇಲ್ಲ. ನಿಗದಿತ ಬೆಲೆ ₹8499.
ಇದೊಂದು ಕಡಿಮೆ ಬೆಲೆಯ ಫೋನ್ ಎನ್ನಬಹುದು. ಅಂತೆಯೇ ಈ ಬೆಲೆಗೆ ಇದು ತಕ್ಕುದಾಗಿದೆಯೇ ಎಂಬುದನ್ನು ವಿಮರ್ಶಿಸಬೇಕಾಗಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ.
ಸುತ್ತ ಲೋಹದ ಫ್ರೇಂ ಇರುವಂತೆ ಭಾಸವಾಗುತ್ತದೆ. ಈ ಫ್ರೇಂನ ಮಧ್ಯದಲ್ಲಿ ಸ್ವಲ್ಪ ತಗ್ಗು ಇದೆ. ಫ್ರೇಂನ ಕೆಳಭಾಗದಲ್ಲಿ ಎರಡು ಗ್ರಿಲ್‌ಗಳಿದ್ದು ಸ್ಪೀಕರ್ ಅದರೊಳಗಿದೆ. ಎರಡು ಗ್ರಿಲ್‌ಗಳಿದ್ದರೂ ಸ್ಪೀಕರ್ ಮಾತ್ರ ಮೋನೊ ಆಗಿದೆ. ಹಿಂಭಾಗದ ಕವಚ ಪ್ಲಾಸ್ಟಿಕ್ಕಿನದ್ದಾಗಿದ್ದು ಸ್ವಲ್ಪ ದೊರಗಾಗಿದೆ. ಈ ಕವಚ ತೆಗೆಯಬಹುದು. ಕವಚ ತೆಗೆದಾಗ ಎರಡು ಮೈಕ್ರೊಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಜಾಗಗಳು ಕಂಡುಬರುತ್ತವೆ.
ಈ ಕವಚದ ಗುಣಮಟ್ಟ ಅಷ್ಟೇನೂ ಉತ್ತಮವಾಗಿ ಇರುವಂತಿಲ್ಲ. ಹಾಗೆಂದು ಅತಿ ಕಳಪೆ ಗುಣಮಟ್ಟದ್ದೂ ಅಲ್ಲ. ಈ ಫೋನಿನಲ್ಲಿ ಪರದೆಯ ಕೆಳಭಾಗದಲ್ಲಿ ಹೆಚ್ಚಿನ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಇರುವಂತೆ ಮೂರು ಸಾಫ್ಟ್‌ ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾದಾಗ ಮೂರು ಬಟನ್‌ಗಳು ಗೋಚರಿಸುತ್ತವೆ. ಇದು ಕೆಲವರಿಗೆ ಇಷ್ಟವಾಗದೆ ಇರಬಹುದು.
ಹೋನರ್‌ನವರು ತಮ್ಮದೇ ಇಎಂಯುಐ ಎಂಬ ಯೂಸರ್ ಇಂಟರ್‌ಫೇಸ್ ಬಳಸುತ್ತಾರೆ. ಇದು ಅಭ್ಯಾಸವಿಲ್ಲದಿದ್ದವರಿಗೆ ಸ್ವಲ್ಪ ವಿಚಿತ್ರ ಅನ್ನಿಸಬಹುದು. ಕೆಲವು ಸೌಲಭ್ಯಗಳು ಎಲ್ಲಿವೆ ಎಂದು ತಡಕಾಡಬೇಕಾಗುತ್ತದೆ. ಒಟ್ಟಿನಲ್ಲಿ ರಚನೆ, ವಿನ್ಯಾಸ ಮತ್ತು ಬಳಕೆಯ ಅನುಭವಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದು.
ಪರದೆಗೆ ಗೊರಿಲ್ಲ ಗಾಜು ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗೀರುಗಳಾಗದಂತೆ ಎಚ್ಚರವಹಿಸಬೇಕು. ಪೆಟ್ಟಿಗೆಯಲ್ಲಿ ಒಂದು ಸ್ಕ್ರೀನ್ ಪ್ರೊಟೆಕ್ಟರ್ ಪರದೆ ನೀಡಿದ್ದಾರೆ. ಅದನ್ನು ಅಂಟಿಸಿಕೊಂಡರೆ ಉತ್ತಮ. ಪರದೆಯ ಗುಣಮಟ್ಟ ಪರವಾಗಿಲ್ಲ. ವಿಡಿಯೊ ವೀಕ್ಷಣೆ, ಆಟ ಆಡಲು ಎಲ್ಲ ಪರವಾಗಿಲ್ಲ. ಆದರೆ ತುಂಬ ಬೆಳಕಿನಲ್ಲಿ ಅಷ್ಟು ಸ್ಫುಟವಾಗಿ ಕಾಣುವುದಿಲ್ಲ.
2 ಗಿಗಾಬೈಟ್ ಮೆಮೊರಿ ಇರುವುದರಿಂದ ಫೋನಿನ ಕೆಲಸದ ವೇಗ ಪರವಾಗಿಲ್ಲ. ಎಲ್ಲ ನಮೂನೆಯ ಆಟಗಳನ್ನು ಆಡಬಹುದು. ಕಡಿಮೆ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನೂ ಆಡಬಹುದು. ಅತ್ಯಂತ ಹೆಚ್ಚು ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಮಾತ್ರ ಇದು ಅಷ್ಟು ಸೂಕ್ತವಾದುದಲ್ಲ. ಹಲವು ಕೆಲಸಗಳನ್ನು ಏಕಕಾಲಕ್ಕೆ ಮಾಡಲೂ ಇದು ಸೂಕ್ತವಲ್ಲ.
ವಿಡಿಯೊ ವೀಕ್ಷಣೆ ಪರವಾಗಿಲ್ಲ. ಹೈಡೆಫಿನಿಶನ್ ವಿಡಿಯೊಗಳನ್ನೂ ವೀಕ್ಷಿಸಬಹುದು. ಆದರೆ 4k ವಿಡಿಯೊ ಪ್ಲೇ ಅಗುವುದಿಲ್ಲ. ಇದರ ಆಡಿಯೊ ಇಂಜಿನ್ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸಿ ಉತ್ತಮ ಸಂಗೀತ ಆಲಿಸಬಹುದು. ಆಟ ಆಡುವಾಗ ಮತ್ತು ಸಿನಿಮಾ ವೀಕ್ಷಣೆ ಮಾಡುವಾಗ ಆಡಿಯೊ ಅನುಭವ ಚೆನ್ನಾಗಿಯೇ ಇದೆ. ಕೊಡುವ ಹಣಕ್ಕೆ ಹೋಲಿಸಿದರೆ ಆಡಿಯೊ ಚೆನ್ನಾಗಿದೆ ಎನ್ನಬಹುದು.
ಇದರಲ್ಲಿ ಬಳಸಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ. ಜೊತೆಗೆ ಎಲ್‌ಇಡಿ ಫ್ಲಾಶ್ ಕೂಡ ಇದೆ. ಕ್ಯಾಮೆರಾದ ಕಿರುತಂತ್ರಾಂಶ (ಆ್ಯಪ್) ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಕೆಲವೇ ಕೆಲವು ಸವಲತ್ತುಗಳಿವೆ. ಇತರೆ ಆಂಡ್ರಾಯ್ಡ್‌ ಫೋನುಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶಗಳಿಗೆ ಹೋಲಿಸಿದರೆ ಇದು ತುಂಬ ಆರಂಭಿಕ ಮಟ್ಟದ್ದು ಎನ್ನಬಹುದು.
ಗೂಗಲ್ ಪ್ಲೇ ಸ್ಟೋರಿನಿಂದ ನಿಮಗಿಷ್ಟವಾದ ಬೇರೆ ಯಾವುದಾದರೂ ಉತ್ತಮ ಕ್ಯಾಮೆರಾ ಕಿರುತಂತ್ರಾಂಶ ಹಾಕಿಕೊಂಡರೆ ಉತ್ತಮ. ಕ್ಯಾಮೆರಾದ ಗುಣಮಟ್ಟವೂ ಅಷ್ಟಕ್ಕಷ್ಟೆ.
13 ಮೆಗಾಪಿಕ್ಸೆಲ್ ರೆಸೊಲೂಶನ್ ಇದ್ದ ಮಾತ್ರಕ್ಕೆ ಉತ್ತಮ ಕ್ಯಾಮೆರಾ ಆಗಬೇಕಾಗಿಲ್ಲ ಎಂಬುದಕ್ಕೆ ಇದೂ ಒಂದು ಉದಾಹರಣೆ. ಹಾಗೆಂದು ಹೇಳಿ ಕ್ಯಾಮೆರಾ ತುಂಬ ಕಳಪೆಯಾಗೇನೂ ಇಲ್ಲ. ನೀಡುವ ಹಣಕ್ಕೆ ಪರವಾಗಿಲ್ಲ ಎನ್ನಬಹುದು. ತುಂಬ ಬೆಳಕಿದ್ದಲ್ಲಿ ಚೆನ್ನಾಗಿ ಫೋಟೊ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲಿ ಅಷ್ಟಕ್ಕಷ್ಟೆ.
ಭಾಷೆಗಳ ವಿಷಯಕ್ಕೆ ಬಂದಾಗ ಕನ್ನಡವನ್ನು ಕಡೆಗಣಿಸಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಮಾತ್ರ ನೀಡಿದ್ದಾರೆ. ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಬ್ಯಾಟರಿ ಬಳಕೆ ಚೆನ್ನಾಗಿದೆ. ಇದರ ಬ್ಯಾಟರಿಯಿಂದ ಇತರೆ ಫೋನ್ ಅಥವಾ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡುವ ಸವಲತ್ತನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕಡಿಮೆ ಬೆಲೆಯ, ನೀಡುವ ಹಣಕ್ಕೆ ತಕ್ಕುದಾದ, ತುಂಬ ಶಕ್ತಿಶಾಲಿಯಾದ ಬ್ಯಾಟರಿ ಇರುವ ಫೋನ್ ಎನ್ನಬಹುದು.
*
ವಾರದ ಆ್ಯಪ್
ಮೂರು ಆಯಾಮದಲ್ಲಿ ಸೌರವ್ಯೂಹ
ನಮ್ಮ ಸೌರವ್ಯೂಹವನ್ನು ತೋರಿಸುವ ಹಲವು ಕಿರುತಂತ್ರಾಂಶಗಳು (ಆ್ಯಪ್) ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿವೆ. ಅಂತಹ ಒಂದು ಕಿರುತಂತ್ರಾಂಶ Solar System 3D Viewer. ಇದು ನಿಮಗೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯ. ಎಲ್ಲ ಗ್ರಹಗಳು ಅವುಗಳ ಉಪಗ್ರಹಗಳೂ ಇದರಲ್ಲಿ ಇವೆ. ಅವುಗಳಲ್ಲಿ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಅದನ್ನು ಮೂರು ಆಯಾಮಗಳಲ್ಲಿ ತಿರುಗಿಸಿ ನೋಡಬಹುದು. ಕ್ಷುದ್ರಗ್ರಹಗಳ ವಿವರಗಳನ್ನೂ ಇದು ನೀಡುತ್ತದೆ. ಬೇರೆ ಬೇರೆ ಗ್ರಹ, ಉಪಗ್ರಹ ಮತ್ತು ಕ್ಷುದ್ರಗ್ರಹಗಳ ಗಾತ್ರಗಳ ಹೋಲಿಕೆಯೂ ಇದೆ. ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮಾತ್ರವಲ್ಲ ಖಗೋಳದಲ್ಲಿ ಆಸಕ್ತಿ ಇರುವವರೆಲ್ಲರಿಗೂ ಒಂದು ಉಪಯುಕ್ತ ಕಿರುತಂತ್ರಾಂಶ ಇದು.
*
ಗ್ಯಾಜೆಟ್ ಸುದ್ದಿ
ಟ್ವಿಟ್ಟರ್‌ಗೆ ಹತ್ತು ತುಂಬಿತು
ತುಂಬ ಜನಪ್ರಿಯವಾದ ಮೈಕ್ರೊ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ಗೆ ಹತ್ತು ವರ್ಷ ತುಂಬಿತು. ಮಾರ್ಚ್ 21, 2006ರಂದು ಟ್ವಿಟ್ಟರ್ ಪ್ರಾರಂಭವಾಯಿತು. ಜಗತ್ತಿನಾದ್ಯಂತ ಸುಮಾರು 3 ಕೋಟಿ ಜನ ಟ್ವಿಟ್ಟರ್ ಬಳಸುತ್ತಿದ್ದಾರೆ. ನಮ್ಮ ದೇಶದ ಬಹುಪಾಲು ಖ್ಯಾತನಾಮರು ಟ್ವಿಟ್ಟರ್ ಬಳಸುತ್ತಾರೆ. ಅದರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್, ರಘು ದೀಕ್ಷಿತ್, ರಮೇಶ ಅರವಿಂದ್, ಎಲ್ಲ ಸೇರಿದ್ದಾರೆ. ಟ್ವಿಟ್ಟರ್‌ನಲ್ಲಿ 140 ಅಕ್ಷರಗಳ ಮಿತಿಯಿದೆ. ಈ ಮಿತಿಯನ್ನು ತೆಗೆಯುವ ಬಗ್ಗೆ ಹಲವು ಸಲ ಚರ್ಚೆಗಳಾಗಿವೆ. ಸದ್ಯಕ್ಕೆ ಈ ಮಿತಿ ಹಾಗೆಯೇ ಮುಂದುವರಿಯುತ್ತದೆ ಎಂದು ಟ್ವಿಟ್ಟರ್‌ನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
*
ಗ್ಯಾಜೆಟ್ ಸಲಹೆ
ಸ್ವಾಮಿಯವರ ಪ್ರಶ್ನೆ: ನೀವು ನೋಶನ್ ಇಂಕ್ ನೈನ್ 2-ಇನ್-1 ಬಗ್ಗೆ ಬರೆದಿದ್ದಿರಿ. ಅದರಲ್ಲಿ ಮೊಬೈಲ್ ಸಿಮ್ ಕಾರ್ಡ್ ಹಾಕುವ ಸೌಲಭ್ಯ ಇದೆಯಾ?
ಉ: ಇದೆ. ಕೆಲವು ಮಾದರಿಗಳಲ್ಲಿ ಅದನ್ನು ಪ್ರತ್ಯೇಕವಾಗಿ ಹಣ ನೀಡಿ ಕೊಂಡು ಸೇರಿಸಿಕೊಳ್ಳಬೇಕು.
ಗ್ಯಾಜೆಟ್ ತರ್ಲೆ
‘ತವರಿಗೆ ಬಾ ತಂಗಿ’ ಎಂಬುದು ಕನ್ನಡದ ಒಂದು ಸಿನಿಮಾ ಹೆಸರು. ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗದ ಹಳ್ಳಿಗೆ ಹೋಗಿರುವ ತಂಗಿಗೆ ಪೇಟೆಯಲ್ಲಿರುವ ಅಣ್ಣ ಫೋನ್ ಮಾಡುತ್ತಾನೆ. ಆಕೆ ಹೇಳುವುದು ಆತನಿಗೆ ಸರಿಯಾಗಿ ಕೇಳುವುದಿಲ್ಲ. ಯಾಕೆಂದರೆ ಆಕೆ ಮೊಬೈಲ್ ಗೋಪುರಕ್ಕಿಂತ ದೂರದಲ್ಲಿದ್ದಾಳೆ. ಆಗ ಆತ ಹೇಳುವುದು ‘ಟವರಿಗೆ ಬಾ ತಂಗಿ’.

Write A Comment