ಕರ್ನಾಟಕ

ಕಲಬುರ್ಗಿ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: ಎಲ್ಲ 26 ನವಜಾತ ಶಿಶುಗಳು ಸುರಕ್ಷಿತ *ಕಂಗಾಲಾದ ಬಾಣಂತಿಯರು

Pinterest LinkedIn Tumblr

.kಕಲಬುರ್ಗಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯ ‘ಅವಧಿ ಪೂರ್ವ ಜನಿಸುವ ಶಿಶುಗಳ ಆರೈಕೆ ವಿಭಾಗ (ಎಸ್‌ಎನ್‌ಸಿಯು)’ದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅನಾಹುತ ಸಂಭವಿಸಿದ್ದು, ಶುಶ್ರೂಷಕರೊಬ್ಬರ ಸಮಯ ಪ್ರಜ್ಞೆಯಿಂದ 26 ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ.
ಹೊಗೆ ವ್ಯಾಪಿಸುತ್ತಿದ್ದಂತೆ ಬಾಣಂತಿಯರು ತಮ್ಮ ಕಂದಮ್ಮಗಳನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ದೃಶ್ಯ ಮನಕಲಕುವಂತಿತ್ತು. ಬರೀ ಮೈಯಲ್ಲಿದ್ದ ಕಂದಮ್ಮಗಳನ್ನು ತೊಡೆಯ ಮೇಲೆ ಹಾಕಿಕೊಂಡು, ಸೀರೆ ಸೆರಗಿನಿಂದ ಅವುಗಳ ಮೈ ಮುಚ್ಚಿ ಜಿಲ್ಲಾ ಆಸ್ಪತ್ರೆ ಬಯಲಿನಲ್ಲೇ ಕುಳಿತು ಬಾಣಂತಿಯರು ಅಳುತ್ತಿದ್ದರು. ಮುಂದೇನು ಮಾಡಬೇಕು ಎಂಬುದು ತೋಚದೆ ಅವರೆಲ್ಲ ಕಂಗಾಲಾಗಿದ್ದರು. ಕೆಲಹೊತ್ತಿನ ನಂತರ ಆ ಕಂದಮ್ಮಗಳನ್ನು ಬೇರೆಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಗೋಳಾಡಿದ ನಾಗಮ್ಮ: ಅವಳಿ ಮಕ್ಕಳಲ್ಲಿ ಒಂದು ಶಿಶು ನನ್ನ ಕೈಗೆ ಕೊಟ್ಟರು. ಇನ್ನೊಂದು ಮಗು ಎಲ್ಲಿ ಹೋಯಿತು ಎಂದು ಬಾಯಿ ಬಡಿದುಕೊಂಡೆ. ನಮ್ಮಣ್ಣ ಇನ್ನೊಂದು ಕೂಸು ಎತ್ತಿಕೊಂಡು ಹೊರಗೆ ಹೋಗಿದ್ದರು. ಆ ಮೇಲೆ ಗೊತ್ತಾಯ್ತು. ಹೋಗಿದ್ದ ಜೀವ ಮರಳಿ ಬಂದಂಗಾಯ್ತು ಎಂದು ಬಂದರವಾಡ ಗ್ರಾಮದ ಬಾಣಂತಿ ನಾಗಮ್ಮ ಭೀಮಾಶಂಕರ ಹೇಳಿದರು.
‘ಕಂದಮ್ಮಗಳನ್ನು ಹೊರ ಸಾಗಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲದಿದ್ದರೆ ಹೊಗೆ ಆವರಿಸಿ ಕಂದಮ್ಮಗಳಿಗೆ ಉಸಿರು ಗಟ್ಟುತ್ತಿತ್ತು’ ಎಂದು ವೈದ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು.
‘ಸ್ಫೋಟದ ಶಬ್ದ ಕೇಳಿತು. ಎಲ್ಲಿ ನೋಡಿದರೂ ಹೊಗೆ ಇತ್ತು. ಸಿಬ್ಬಂದಿ ಎತ್ತಿಕೊಟ್ಟ ಶಿಶುಗಳನ್ನು ಎತ್ತಿಕೊಂಡು ಹೊರಹೋದೆವು’ ಎಂದು ಇನ್ನೂ ಘಟನೆ ಆಘಾತದಿಂದ ಹೊರಬಾರದ ಸಂಗೀತಾ ಧನರಾಜ ಕಣ್ಣೀರಿಟ್ಟರು.
‘ಎಸ್‌ಎನ್‌ಸಿಯು ವಿಭಾಗದಲ್ಲಿ 26 ಶಿಶುಗಳನ್ನು ಆರೈಕೆ ಮಾಡಲಾಗುತ್ತಿತ್ತು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಲ್ಲಿಯ ಎಸಿಯಲ್ಲಿ ಸ್ಫೋಟ ಕಾಣಿಸಿಕೊಂಡಿದೆ. ತಕ್ಷಣವೇ ವೈದ್ಯರು ಮತ್ತು ಸಿಬ್ಬಂದಿ ಅಲ್ಲಿಯ ಎಲ್ಲ ಶಿಶುಗಳನ್ನು ಹೊರ ಸಾಗಿಸಿ, ಅವುಗಳ ತಾಯಂದಿರರಿಗೆ ಒಪ್ಪಿಸಿದರು’ ಎಂದು ಜಿಲ್ಲಾ ಸರ್ಜನ್‌ ಡಾ.ನಳಿನಿ ನಮೋಶಿ ತಿಳಿಸಿದರು.
‘ಯಾವುದೇ ಶಿಶುವಿಗೆ ತೊಂದರೆ ಆಗಿಲ್ಲ. ಆದರೆ, ಆ ಶಿಶುಗಳಿಗೆ ಎಸ್‌ಎನ್‌ಸಿಯುನಲ್ಲಿಟ್ಟು ಆರೈಕೆ ಮಾಡುವ ಅಗತ್ಯ ಇರುವ ಕಾರಣ ಕೆಬಿಎನ್‌, ಸಂಗಮೇಶ್ವರ ಹಾಗೂ ಬಸವೇಶ್ವರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ’ ಎಂದರು.
ವರದಿಗೆ ಸೂಚನೆ: ವಿಷಯ ತಿಳಿದ ಆರೋಗ್ಯ ಖಾತೆಯ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಅವರು, ನವಜಾತ ಶಿಶುಗಳ ಆರೈಕೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆಸ್ಪತ್ರೆಯ ಸರ್ಜನ್‌ಗೆ ಸೂಚಿಸಿದರು. ಐಜಿಪಿ ಬಿ.ಶಿವಕುಮಾರ್‌, ಜಿಲ್ಲಾಧಿಕಾರಿ ವಿಪುಲ್‌ ಬನ್ಸಲ್‌ ಆಸ್ಪತ್ರೆಗೆ ಧಾವಿಸಿದರು.
‘ಶಿಶುಗಳಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ. ಶಿಶುಗಳನ್ನು ರಕ್ಷಿಸಿದ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ವಿದ್ಯುತ್‌ ಪರಿಶೋಧನಾ ವರದಿ(ಪವರ್ ಆಡಿಟಿಂಗ್‌) ತಯಾರಿಸಲು ಆದೇಶಿಸಲಾಗಿದೆ. ಈ ವರದಿಯು ಶನಿವಾರ ಬರಲಿದ್ದು, ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಘಟನೆ ಬಗ್ಗೆ ಸುದ್ದಿವಾಹಿನಿಯೊಂದು ತಪ್ಪಾಗಿ ವರದಿ ಪ್ರಸಾರ ಮಾಡಿದ್ದು, ಆ ವಾಹಿನಿಗೆ ನೋಟಿಸ್‌ ನೀಡಲಾಗುವುದು’ ಎಂದರು.
ಅಪೌಷ್ಟಿಕತೆ: ಹೈದರಾಬಾದ್‌ ಕರ್ನಾಟಕ ಪ್ರದೇಶದ ಗರ್ಭಿಣಿಯರಲ್ಲಿ ಅಪೌಷ್ಟಿಕ ಸಮಸ್ಯೆ ಹೆಚ್ಚು. ಹೀಗಾಗಿ ಈ ಭಾಗದಲ್ಲಿ ಅವಧಿ ಪೂರ್ವ ಮಕ್ಕಳ ಜನನ ಪ್ರಮಾಣ ಹೆಚ್ಚು ಮತ್ತು ಬಹುಪಾಲು ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲುತ್ತಿರುತ್ತವೆ. ಇಂತಹ ಶಿಶುಗಳ ಆರೈಕೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ಇದೆ.
ಸಮಯಪ್ರಜ್ಞೆ ಮೆರೆದ ಶುಶ್ರೂಷಕ
ಆಸ್ಪತ್ರೆಯ ಎಸ್‌ಎನ್‌ಸಿಯು ವಿಭಾಗದಲ್ಲಿ ಎರಡು ಕೋಣೆಗಳಿವೆ. ಎ.ಸಿ ಅಳವಡಿಸಿದ್ದರಿಂದ ಕಿಟಕಿ–ಬಾಗಿಲು ಮುಚ್ಚಲಾಗಿತ್ತು. ಅಲ್ಲಿಯ ಒಂದು ಎ.ಸಿ ಸ್ಫೋಟಗೊಂಡು ಬೆಂಕಿ ಹತ್ತಿತು. ಕ್ಷಣಾರ್ಧದಲ್ಲಿಯೇ ದಟ್ಟ ಹೊಗೆ ಇಡೀ ಕೋಣೆಯನ್ನು ಆವರಿಸಿತು.
ಪರಿಸ್ಥಿತಿ ಕೈಮೀರುವುದನ್ನು ಅರಿತ ಶೂಶ್ರುಷಕ ಫಕೀರಪ್ಪ ದೊಡ್ಡಮನಿ ಅವರು, ಶಿಶುಗಳ ರಕ್ಷಣೆಗೆ ಮುಂದಾದರು. ಕೋಣೆಯ ಕಿಟಕಿಯ ಗಾಜನ್ನು ಕೈಯಿಂದ ಒಡೆದು ಹೊಗೆ ಹೊರಹೋಗುವಂತೆ ಮಾಡಿದರು. ಇನ್‌ಕ್ಯುಬಿಟರ್‌ ಯಂತ್ರಗಳಲ್ಲಿದ್ದ ಶಿಶುಗಳನ್ನು ಎತ್ತಿ ತಾಯಂದಿರ ಕೈಗೆ ಕೊಟ್ಟರು. ಈ ಘಟನೆಯಲ್ಲಿ ಅವರ ಕೈಗೆ ಗಾಯವಾಗಿದೆ.

Write A Comment