ರಾಷ್ಟ್ರೀಯ

ಹೈದರಾಬಾದ್‌ ವಿ.ವಿ ಪ್ರಕ್ಷುಬ್ಧ; ಕನ್ಹಯ್ಯಾಗೆ ಪ್ರವೇಶ ನಿಷೇಧ

Pinterest LinkedIn Tumblr

jnuಹೈದರಾಬಾದ್‌(ಪಿಟಿಐ): ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದ್ದು, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರಿಗೆ ಬುಧವಾರ ವಿ.ವಿ ಆವರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ವಿ.ವಿಯ ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಅವರ ಆತ್ಮಹತ್ಯೆಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕನ್ಹಯ್ಯಾ ಅವರು ಮಾತನಾಡುವ ಕಾರ್ಯಕ್ರಮವನ್ನು ವಿ.ವಿ. ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೋಹಿತ್‌ ಅವರ ತಾಯಿ ಮತ್ತು ಸಹೋದರನೊಂದಿಗೆ ಕನ್ಹಯ್ಯಾ ಅವರು ವಿ.ವಿ ಆವರಣದ ಸಮೀಪ ಬಂದಾಗ ಅಲ್ಲಿ ಅವರ ಪರ ಮತ್ತು ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ನಿಷೇಧ: ರಾಜಕೀಯ ಮುಖಂಡರು ಸೇರಿದಂತೆ ಹೊರಗಿನವರಿಗೆ ಪ್ರವೇಶ ನಿಷೇಧಿಸಿ ಮಂಗಳವಾರ ಬೆಳಗ್ಗೆ ವಿ.ವಿ. ಆಡಳಿತ ನಿರ್ಧಾರ ಕೈಗೊಂಡಿತ್ತು. ಸಾಮಾಜಿಕ ಗುಂಪುಗಳು ಅಥವಾ ಹೊರಗಿನ ವಿದ್ಯಾರ್ಥಿ ಗುಂಪುಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು. ಮುಂದಿನ ನಾಲ್ಕು ದಿನಗಳವರೆಗೆ (ಸೋಮವಾರ) ವಿ.ವಿಯಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ವಿ.ವಿ ಆವರಣದ ಹೊರಗೆ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ವಿ.ವಿ ಗೇಟ್‌ ಬಳಿ ಕನ್ಹಯ್ಯಾ ಅವರೊಂದಿಗಿದ್ದ ಸಿಪಿಐ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು. ಆದರೆ, ಕನ್ಹಯ್ಯಾ ಅವರು ವಿ.ವಿ. ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ.
25 ವಿದ್ಯಾರ್ಥಿಗಳ ಬಂಧನ: ವಿ.ವಿಯ ಕುಲಪತಿ ಅಪ್ಪಾ ರಾವ್‌ ಪೊಡಿಲೆ ಅವರ ನಿವಾಸಕ್ಕೆ ಕಲ್ಲು ತೂರಾಟ ನಡೆಸಿ ದಾಂದಲೆ ಎಬ್ಬಿಸಿದ್ದ ಆರೋಪದಲ್ಲಿ ಪೊಲೀಸರು 25 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಸರ್ಕಾರ, ಪೊಲೀಸ್‌ ವಿರುದ್ಧ ಟೀಕೆ: ವಿ.ವಿ ಆವರಣದ ಹೊರಗೆ ಮಾತನಾಡಿದ ಕನ್ಹಯ್ಯಾ, ವಿ.ವಿ ಕೈಗೊಂಡ ಕ್ರಮ ನಾಚಿಕೆಗೇಡಿನದು ಎಂದು ಹೇಳಿದರು.
‘ಈ ಎಲ್ಲದಕ್ಕೂ ವಿ.ವಿ ಆಡಳಿತ ಮತ್ತು ಪೊಲೀಸರು ಕಾರಣ. ಪ್ರಜಾತಂತ್ರ ಮತ್ತು ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ.
ಪ್ರಜಾತಂತ್ರದ ಮೇಲೆ ನಡೆಯುವ ದಾಳಿಯನ್ನು ಸಹಿಸುವುದಿಲ್ಲ. ಜಾತೀಯತೆ ಮತ್ತು ಅಸ್ಪೃಶ್ಯತೆಯಿಂದ ನಮಗೆ ಸ್ವಾತಂತ್ರ್ಯ ಬೇಕು. ನಮ್ಮನ್ನು ಒಳಗೆ ಬಿಟ್ಟಿದ್ದರೆ ನಾವು ವಿ.ವಿಯ ಶಾಂತಿ ಕದಡುತ್ತಿರಲಿಲ್ಲ’ ಎಂದು ಕನ್ಹಯ್ಯಾ ಹೇಳಿದರು.
ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯುವುಕ್ಕಾಗಿಯೇ ಜೆಎನ್‌ಯುನಲ್ಲಿ ನಡೆದ ದೇಶದ್ರೋಹ ಆರೋಪದ ಪ್ರಕರಣವನ್ನು ಕೇಂದ್ರ ಸರ್ಕಾರ ದೊಡ್ಡದು ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ಹಯ್ಯಾ ಆರೋಪಿಸಿದರು.
‘ಜೈಲಿನಿಂದ ಹೊರಗೆ ಬಂದ ತಕ್ಷಣ ನ್ಯಾಯವನ್ನು ಉಳಿಸಲು ಹೈದರಾಬಾದ್‌ಗೆ ಬರಲು ನಿರ್ಧರಿಸಿದ್ದೆ’ ಎಂದರು.
ಕುಲಪತಿ ವಿರುದ್ಧ ಕ್ರಮ ಇಲ್ಲ (ಪ್ರಜಾವಾಣಿ ವರದಿ): ಹೈದರಾಬಾದ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಪ್ಪಾರಾವ್‌ ಪೊಡಿಲೆ ಅವರನ್ನು ವಜಾ ಗೊಳಿಸುವ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬುಧವಾರ ಹೇಳಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಶೀದ್‌ ನೇತೃತ್ವದ ನಿಯೋಗ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನಯ್‌ ಶೀಲ್‌ ಒಬೆರಾಯ್‌ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಇಟ್ಟ ಮುಂದಿಟ್ಟ ಸಂದರ್ಭದಲ್ಲಿ ಇಲಾಖೆಯು ಈ ಸ್ಪಷ್ಟನೆ ನೀಡಿದೆ.
ಹೈದರಾಬಾದ್‌ ವಿವಿ ಕುಲಪತಿ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ನಿಯೋಗವು ಮನವಿ ಮಾಡಿದಾಗ, ‘ಕುಲಪತಿಗಳನ್ನು ನೇಮಿಸುವ ಅಧಿಕಾರ ರಾಷ್ಟ್ರಪತಿಯವರಿಗೆ ಮಾತ್ರ ಇದೆ’ ಎಂದು ವಿನಯ್‌ ಶೀಲ್‌ ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ಧಾರ: ಕುಲಪತಿ ಅಪ್ಪಾರಾವ್‌ ಅವರನ್ನು ವಜಾ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರಾಕರಿಸಿರುವುದರಿಂದ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ
ನವದೆಹಲಿ (ಪಿಟಿಐ): ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಖಂಡಿಸಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಪ್ರತಿಭಟನೆ ಬುಧವಾರ ತೀವ್ರವಾಗಿದೆ.
ಹೈದರಾಬಾದ್‌ ವಿ.ವಿ ಕುಲಪತಿ ಅಪ್ಪಾರಾವ್‌ ಪೊಡಿಲೆ ಅವರನ್ನು ವಜಾ ಮಾಡಬೇಕು ಮತ್ತು ವಿ.ವಿ ಆವರಣದಿಂದ ಪೊಲೀಸರನ್ನು ಹೊರಗೆ ಕಳುಹಿಸಬೇಕು ಎಂದು ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದರು.

Write A Comment