ಮುಂಬಯಿ : ಭಾರತದ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ಆಗಿರುವ 27ರ ಹರೆಯದ ವಿರಾಟ್ ಕೊಹ್ಲಿ ಇದೀಗ ಇನ್ನೊಂದು ಶತಕವನ್ನು ಬಾರಿಸಿದ್ದಾರೆ ! ಎಲ್ಲಿ – ಏನು – ಯಾವಾಗ – ಹೇಗೆ ಎಂದು ನೀವು ಪ್ರಶ್ನಿಸಬಹುದು; ಆದರೆ ಕೊಹ್ಲಿ ಹೊಡೆದಿರುವ ಈ ಶತಕ ಕೋಟಿಗಳದ್ದು ಎಂದು ಹೇಳಿದರೆ ನಿಮಗೆ ಅಚ್ಚರಿಯಾದೀತು !
ವಿರಾಟ್ ಕೊಹ್ಲಿ ಅವರೀಗ ಕಾರ್ಪೊರೇಟ್ ಜಾಹೀರಾತು ಜಗತ್ತಿನ ಅಚ್ಚುಮೆಚ್ಚಿನ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಏನಿಲ್ಲವೆಂದರೂ 13 ಬ್ರ್ಯಾಂಡ್ ಗಳಿವೆ. ಅಂತೆಯೇ ಅವರು ಜಾಹೀರಾತು ಮೂಲಕ ವರ್ಷಕ್ಕೆ ನೂರು ಕೋಟಿ ರೂಪಾಯಿಗಳನ್ನು ಸಂಪಾದಿಸುವ ಬೆರಳೆಣಿಕೆಯ ಭಾರತೀಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.
ವಿರಾಟ್ ಕೊಹ್ಲಿ ಜಾಹೀರಾತು ಮೂಲಕ ಸಂಪಾದಿಸುವ ಹಣ ಭಾರತದ ನಿಗದಿತ ಓವರ್‌ಗಳ ಕ್ರಿಕೆಟ್ ಕ್ಯಾಪ್ಟನ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ಹೆಚ್ಚಲ್ಲದಿದ್ದರೂ ಬಹಳ ಕಡಿಮೆಯೇನೂ ಅಲ್ಲ ! ಈ ಮಾತನ್ನು ಕಾರ್ನರ್ ಸ್ಟೋನ್ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೇನ್‌ಮೆಂಟ್‌ನ ಸಿಇಓ ಬಂಟಿ ಸಜ್‌ದೇಹ್ ಹೇಳುತ್ತಾರೆ.
ಕೊಹ್ಲಿ ಅವರು ವಿಶ್ವಪ್ರಖ್ಯಾತ ಆಡಿದಾಸ್ ಬ್ರಾಂಡ್ ಪ್ರಚಾರಕನಾಗಿ 2014ರಿಂದ ತೊಡಗಿಕೊಂಡಿದ್ದು ವರ್ಷಕ್ಕೆ 10 ಕೋಟಿ ರೂ. ಸಂಭಾವನೆಯನ್ನು ಈ ಮೂಲಕ ಪಡೆಯುತ್ತಿದ್ದಾರೆ ಎಂದು ಇಎಸ್‌ಪಿ ಪ್ರಾಪರ್ಟಿಸ್ – ನ್ಪೋರ್ಟ್ಸ್ ಪವರ್ ರಿಪೋರ್ಟ್ 2015 ವರದಿ ತಿಳಿಸುತ್ತದೆ.
ವರ್ಷಕ್ಕೆ 6.5 ಕೋಟಿ ಸಂಪಾದಿಸುವ ಎಂಆರ್‌ಎಫ್ ಜಾಹೀರಾತು ಗುತ್ತಿಗೆಯು ಕೊಹ್ಲಿ ಕುದುರಿಸಿಕೊಂಡಿರುವ ಎರಡನೇ ದೊಡ್ಡ ಮೊತ್ತದ ವಹಿವಾಟು ಆಗಿದೆ.
ಇದರ ಜತೆಗೆ ಕೊಹ್ಲಿ , ಪೆಪ್ಸಿ, ಆಡಿ, ವಿಕ್ಸ್, ಬೂಸ್ಟ್, ಯುಎಸ್‌ಎಲ್, ಟಿವಿಎಸ್, ಸ್ಮ್ಯಾಶ್, ನಿತೇಶ್ ಎಸ್ಟೇಟ್, ಟಿಸ್ಸಾಟ್, ಹರ್ಬಲೈಪ್ ಮತ್ತು ಕೋಲ್ಗೇಟ್ ಬ್ರಾಂಡ್ ಪ್ರಚಾರಕ್ಕಾಗಿ ಭರ್ಜರಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ.
27ರ ಹರೆಯದ ವಿರಾಟ್ ಕೊಹ್ಲಿ ದೈಹಿಕವಾಗಿ ಮಾನಸಿಕವಾಗಿ ತುಂಬಾ ದೃಢತೆಯನ್ನು ಹೊಂದಿರುವ ತರುಣ ಕ್ರೀಡಾ ಪಟು ಆಗಿರುವುದರಿಂದ ಜಾಹೀರಾತು ಪ್ರಚಾರಕ್ಕೆ ಹೇಳಿ ಮಾಡಿಸಿದಂತಿರುವ ವ್ಯಕ್ತಿಯಾಗಿದ್ದಾರೆ ಎಂದು ಸಿಇಓ ಬಂಟಿ ಸಜ್‌ದೇಹ್ ಹೇಳುತ್ತಾರೆ.
-ಉದಯವಾಣಿ