ಕರ್ನಾಟಕ

ದೇಶ ಬಿಟ್ಟ ಸಾಲಗಾರ ದೇಶದ್ರೋಹಿ ಆಗಲಿಲ್ಲ: ವಿಮರ್ಶಕ ನಟರಾಜ್‌ ಹುಳಿಯಾರ್‌ ಬೇಸರ

Pinterest LinkedIn Tumblr

naಬೆಂಗಳೂರು: ‘ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋದ ವ್ಯಕ್ತಿಯನ್ನು ದೇಶದ್ರೋಹಿ ಎಂದು ಒಬ್ಬರೂ ಕರೆಯುತ್ತಿಲ್ಲ. ಆದರೆ, ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ’ ಎಂದು ವಿಮರ್ಶಕ ಡಾ. ನಟರಾಜ್‌ ಹುಳಿಯಾರ್‌ ಬೇಸರ ವ್ಯಕ್ತಪಡಿಸಿದರು.
ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಅಂಗವಾಗಿ ಭಾರತಯಾತ್ರಾಕೇಂದ್ರ, ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್‌ ಹಾಗೂ ಎಂ.ಪಿ. ಪ್ರಕಾಶ್‌ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ದೇಶಪ್ರೇಮ, ಕೇಸರಿ, ಧರ್ಮ, ಮಂದಿರಗಳನ್ನು ಕಟ್ಟುವ ಹೇಳಿಕೆಗಳನ್ನು ನೀಡುವುದರಿಂದ ವ್ಯಾಪಾರಿ ವರ್ಗ, ಪುರೋಹಿತ ವರ್ಗಕ್ಕೆ ಅನುಕೂಲ ಆಗುತ್ತದೆ. ಈ ವ್ಯಾಪಾರಿ ವರ್ಗ, ಬಂಡವಾಳಶಾಹಿ ವರ್ಗದ ಸಂಚನ್ನು ಹೊಡೆಯುವುದೇ ಸಮಾಜವಾದದ ಕೆಲಸ. ಅದು ನಿರಂತರವಾಗಿ ನಡೆಯುತ್ತಿರಬೇಕು’ ಎಂದು ಹೇಳಿದರು.
‘ಬಲಪಂಥಕ್ಕೆ ಚಿಂತನೆ ಇಲ್ಲ. ಅದು ಈಗಾಗಲೇ ನಿರ್ಮಿಸಲ್ಪಟ್ಟ ವ್ಯವಸ್ಥೆ, ಸಂಪ್ರದಾಯವನ್ನು ಕಾಲಕಾಲಕ್ಕೆ ನೆನಪಿಸುವಂತಹದ್ದು. ಎಡಪಂಥ, ಸಮಾಜವಾದದೊಳಗೆ ಚಿಂತನೆ ಇದೆ. ಇದರಲ್ಲಿ ಯಾವುದೇ ಗೊಂದಲ ಇಟ್ಟುಕೊಳ್ಳಬಾರದು’ ಎಂದರು.
‘ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಬಗ್ಗೆ ರಾಜಕೀಯ ಪಕ್ಷಗಳು 20 ವರ್ಷಗಳಿಂದ ಸುಳ್ಳು ಚರ್ಚೆಯನ್ನು ಮಾಡಿಕೊಂಡು ಬರುತ್ತಿವೆ. ರಾಷ್ಟ್ರೀಯ ಪಕ್ಷಗಳಲ್ಲಿ ಈ ಮೀಸಲಾತಿ ಜಾರಿಗೆ ಬರಬೇಕು ಎಂಬ ಇಚ್ಛೆ ಇಲ್ಲ. ಪ್ರಾದೇಶಿಕ ಪಕ್ಷಗಳಾದರೂ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು’ ಎಂದರು.
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ದೇಶದಲ್ಲಿ ನಡೆದ ಎಲ್ಲ ಜನಪರ ಚಳವಳಿಗಳ ಹಿಂದೆ ಒಡಲಾಳದ ಶಕ್ತಿಯಾಗಿ ಸಮಾಜವಾದ ಕೆಲಸ ಮಾಡಿದೆ. ಸಮಾಜವಾದಿ ಚಿಂತನೆಗಳು ವಿಕೇಂದ್ರೀಕೃತಗೊಂಡು ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಬೇಕು. ಹೊಸ ಪೀಳಿಗೆಯನ್ನು ಸಮಾಜವಾದದ ಕಡೆಗೆ ಸೆಳೆಯಬೇಕಿದೆ’ ಎಂದು ಹೇಳಿದರು.
ಲೋಹಿಯಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಕೆಲ್‌ ಫರ್ನಾಂಡಿಸ್‌ ಮಾತನಾಡಿ, ‘ನನ್ನ ಅಣ್ಣ ಲಾರೆನ್ಸ್‌ ಫರ್ನಾಂಡಿಸ್‌ ಮದುವೆ ಆಗಿರಲಿಲ್ಲ. ಅವರು ನಿಧನರಾದ ಬಳಿಕ ಅವರ ಪಾಲಿನ ಆಸ್ತಿಯನ್ನು ನಾವು ಹಂಚಿಕೊಳ್ಳಲಿಲ್ಲ. ಅವರ ಹೆಸರಿನಲ್ಲಿ ಫೌಂಡೇಷನ್‌ ಸ್ಥಾಪಿಸಿ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಮೂಲಕ ಸಮಾಜವಾದ ಚಿಂತನೆಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ’ ಎಂದರು.
‘ನಾನು ಪೂರ್ಣ ಪ್ರಮಾಣದಲ್ಲಿ ಸಮಾಜವಾದಿ ಅಲ್ಲ. ಸಮಾಜವಾದವನ್ನು ಅಭ್ಯಾಸ ಮಾಡುತ್ತಿರುವ ಸಾಮಾನ್ಯ ವ್ಯಕ್ತಿ’ ಎಂದು ಹೇಳಿದರು.

Write A Comment