ಕರ್ನಾಟಕ

ನಕಲಿ ಹುದ್ದೆ ಸೃಷ್ಟಿಸಿ, ₹33 ಲಕ್ಷ ಸಂಗ್ರಹ!: ಸಿಐಡಿ ಬಲೆಗೆ ಬಿದ್ದ ಬಿ.ಕಾಂ ವಿದ್ಯಾರ್ಥಿ

Pinterest LinkedIn Tumblr

pvec24mar16svCID arjun arrestಬೆಂಗಳೂರು: ಸರ್ಕಾರದ ಹೆಸರಿನಲ್ಲಿ ವೆಬ್‌ಸೈಟ್ ಪ್ರಾರಂಭಿಸಿದ್ದ ಈ ವಿದ್ಯಾರ್ಥಿ, ಹುದ್ದೆಗಳು ಖಾಲಿ ಇರುವುದಾಗಿ ಸುಳ್ಳು ಅಧಿಸೂಚನೆ ಹೊರಡಿಸಿದ್ದ. ಈ ಮೂಲಕ ಸುಮಾರು 9 ಸಾವಿರ ಅಭ್ಯರ್ಥಿಗಳನ್ನು ನಂಬಿಸಿ, ಅರ್ಜಿ ಶುಲ್ಕದ ಹೆಸರಿನಲ್ಲಿ ಈತ ಸಂಗ್ರಹಿಸಿದ್ದು ಬರೋಬ್ಬರಿ ₹ 33 ಲಕ್ಷ!
ದೂರ ಶಿಕ್ಷಣದ ಮೂಲಕ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಎ.ಅರ್ಜುನ್‌ನ (24) ವಂಚನೆಯ ಪರಿ ಇದು. ಕೆಂಗೇರಿ ಸಮೀಪದ ರಾಯಸಂದ್ರ ನಿವಾಸಿಯಾದ ಈತ, ಪಿಯುಸಿ ಮುಗಿಸಿ ಸರ್ಕಾರಿ ಕೆಲಸ ಸಿಗದ ಕಾರಣಕ್ಕೆ ಈ ಅಡ್ಡದಾರಿ ಹಿಡಿದಿದ್ದ. ಇದೀಗ ಸಿಐಡಿ ಸೈಬರ್ ವಿಭಾಗದ ಪೊಲೀಸರ ಕೈಗೆ ಸಿಕ್ಕು, ಕಂಬಿ ಹಿಂದೆ ಸೇರಿದ್ದಾನೆ.
‘ಆರೋಪಿ ಅರ್ಜುನ್, ಪಿಯುಸಿ ನಂತರ ಸಣ್ಣ ಪುಟ್ಟ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಬರುತ್ತಿದ್ದ ವೇತನ ಈತನ ಖರ್ಚು–ವೆಚ್ಚಗಳಿಗೆ ಸಾಕಾಗುತ್ತಿರಲಿಲ್ಲ. ಕೆಲವರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಾರ್ವಜನಿಕರಿಂದ ದೇಣಿಗೆ ಮೂಲಕ ಹಣ ಸಂಗ್ರಹಿಸುವುದನ್ನು ಕಂಡಿದ್ದ ಆರೋಪಿ, ತಾನೂ ಅದೇ ರೀತಿ ಸುಲಭವಾಗಿ ಹಣ ಗಳಿಸುವ ನಿರ್ಧಾರಕ್ಕೆ ಬಂದಿದ್ದ’ ಎಂದು ತನಿಖಾಧಿಕಾರಿಗಳು ವಿವರಿಸಿದರು.
ಅದರಂತೆ ‘ಕರ್ನಾಟಕ ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ (ಕೆಎಸ್‌ಇಸಿಎಸ್‌)’ ಹೆಸರಿನಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿದ ಈತ, ಸುಳ್ಳು ಅಧಿಸೂಚನೆಗಳನ್ನು ಹೊರಡಿಸಲು www.ksecsorg.in ವೆಬ್‌ಸೈಟ್ ತೆರೆದಿದ್ದ.
ಮಾದರಿ ವೆಬ್‌ಸೈಟ್!: ಸರ್ಕಾರದ ಅಧಿಕೃತ ವೆಬ್‌ಸೈಟ್ ಹೇಗಿರುತ್ತದೆ, ಸಾಮಾನ್ಯವಾಗಿ ಯಾವ ಸಮಯದಲ್ಲಿ ಇಲಾಖೆಗಳು ಅಧಿಸೂಚನೆಗಳನ್ನು ಪ್ರಕಟಿಸುತ್ತವೆ, ಅರ್ಜಿ ನಮೂನೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡಿದ್ದ ಆರೋಪಿ, ಕೆಪಿಎಸ್ಸಿಯ ಲೋಗೊಗಳನ್ನು ಬಳಸಿಕೊಂಡು ಅದೇ ಮಾದರಿಯಲ್ಲಿ ತನ್ನ ವೆಬ್‌ಸೈಟ್ ಸಿದ್ಧಪಡಿಸಿದ್ದ.
ನಂತರ ಕೆಎಸ್‌ಇಸಿಎಸ್‌ಯ ಕಾರ್ಯ ನಿರ್ವಾಹಕ ಕಚೇರಿ, ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾಂಗಣ ಕಚೇರಿಗಳಲ್ಲಿ ಖಾಲಿ ಇರುವ 728 ಬೋಧಕೇತರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಇದೇ ಜ.16ರಂದು ವೆಬ್‌ಸೈಟ್‌ನಲ್ಲಿ ಸುಳ್ಳು ಅಧಿಸೂಚನೆ ಪ್ರಕಟಿಸಿದ್ದ. ಈ ಬಗ್ಗೆ ಸಂಸ್ಥೆ ಹೆಸರಿನಲ್ಲಿ ದಿನಪತ್ರಿಕೆಗಳಿಗೆ ಜಾಹೀರಾತನ್ನೂ ಕೊಟ್ಟಿದ್ದ.
ಇ–ಪೇಮೆಂಟ್: ‘ಅಭ್ಯರ್ಥಿಗಳು ಅಂಚೆ ಕಚೇರಿಯಲ್ಲಿ ಇ–ಪೇಮೆಂಟ್ ಮೂಲಕ ಏ.5ರೊಳಗೆ ಶುಲ್ಕ ಪಾವತಿಸಬೇಕು ಎಂದು ಅರ್ಜುನ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ₹ 250 ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ₹ 500 ಶುಲ್ಕ ನಿಗದಿಪಡಿಸಿದ್ದ. ಅದು ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುತ್ತಿದ್ದ ಕಾರಣ 9,029 ಅಭ್ಯರ್ಥಿಗಳು ಯಾವುದೇ ಅನುಮಾನಕ್ಕೆ ಒಳಗಾಗದೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದರು.
‘ಆರೋಪಿಯು ಕೆಎಸ್‌ಇಸಿಎಸ್‌ ಸಂಸ್ಥೆ ಹೆಸರಿನಲ್ಲೇ ಎಸ್‌ಬಿಐ ಬ್ಯಾಂಕ್‌ನ ವಿಶ್ವೇಶ್ವರಯ್ಯ ಬಡಾವಣೆಯ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿದ್ದ. ಅಂಚೆ ಕಚೇರಿಯ ಬಿಲ್ಲರ್– ಐಡಿಯಲ್ಲಿದ್ದ ₹ 33 ಲಕ್ಷವು ಇನ್ನೆರಡು ದಿನಗಳಲ್ಲಿ ಆರೋಪಿಯ ಖಾತೆಗೆ ವರ್ಗಾವಣೆಯಾಗುತ್ತಿತ್ತು.
‘ಕೂಡಲೇ ಅಂಚೆ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ, ಹಣ ವರ್ಗಾವಣೆ ಪ್ರಕ್ರಿಯೆ ತಡೆಯಲಾಯಿತು. ಆತ ತೆರೆದಿದ್ದ ವೆಬ್‌ಸೈಟನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಇಂಥ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪತ್ರಿಕಾ ವರದಿಗಾರರಿಂದ ಸಿಕ್ಕ ಸುಳಿವು
ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಆರಂಭವಾಗದಿದ್ದಾಗ ಕೆಲ ಅಭ್ಯರ್ಥಿಗಳು ಪತ್ರಿಕಾ ವರದಿಗಾರರಿಗೆ ವಿಷಯ ತಿಳಿಸಿದ್ದರು. ಅವರು ನೀಡಿದ ಸುಳಿವು ಆಧರಿಸಿ ಸಿಐಡಿ ತಂಡ ತನಿಖೆ ನಡೆಸಿದಾಗ ವಂಚಕನ ಕೃತ್ಯ ಬೆಳಕಿಗೆ ಬಂದಿದೆ.

Write A Comment