
ಬೆಂಗಳೂರು: ಬಾಂಗ್ಲಾದೇಶದ ಸಂಘಟಿತ ಹೋರಾಟದ ನಡುವೆಯೂ ಭಾರತ 1 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ, ಉಪಾಂತ್ಯದ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಭಾರತ ನೀಡಿದ್ದ 147 ರನ್ ಗಳ ಗುರಿ ಬೆನ್ನುಹತ್ತಿದ್ದ ಬಾಂಗ್ಲಾದೇಶ ಅಂತಿಮ ಓವರ್ ನ ಕೊನೆಯ ಎಸೆತದವರೆಗೂ ಹೋರಾಟ ನಡೆಸಿತ್ತು, ಆದರೆ ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡಿದ ಹಾರ್ಧಿಕ್ ಪಾಂಡ್ಯ ಬಾಂಗ್ಲಾ ಹುಲಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ತೀವ್ರ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಭಾರತ ಕೇವಲ 1 ರನ್ ಅಂತರದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು.




ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ನಿಧಾನಗತಿಯ ಆರಂಭ ಕಂಡಿತು. ರೋಹಿತ್ ಶರ್ಮಾ (18), ಧವನ್ (23), ನಿರೀಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (24), ಅಲ್ಪ ಮೊತ್ತಕ್ಕೆ ಔಟ್ ಆಗುವ ಮೂಲಕ ಭಾರತದ ಸಾಧಾರಣ ಮೊತ್ತಕ್ಕೆ ಕಾರಣರಾದರು. ಸುರೇಶ್ ರೈನಾ ಕೊಂಚ ಹೋರಾಟದ ಬ್ಯಾಟಿಂಗ್ ಪ್ರದರ್ಶನ ನೀಡಿದರಾದರೂ, ತಂಡ ಸವಾಲಿನ ಮೊತ್ತ ಗಳಿಸಲು ಅದು ಸಾಕಾಗಲಿಲ್ಲ. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಬಾಂಗ್ಲಾಪರ ಮುಸ್ತಫಿಜುರ್ ರೆಹಮಾನ್ ಮತ್ತು ಅಮಿನ್ ಹುಸ್ಸೇನ್ ತಲಾ 2 ವಿಕೆಟ್ ಪಡೆದರೆ, ಮಹಮದುಲ್ಲಾ, ಶಕೀಬ್ ಅಲ್ ಹಸನ್, ಶುವಾಗತ ಹೊಮ್ ತಲಾ 1 ವಿಕೆಟ್ ಪಡೆದು ಭಾರತದ ಮೇಲೆ ಒತ್ತಡ ಹೇರಿದರು.




ಇನ್ನು ಭಾರತ ನೀಡಿದ 147 ರನ್ ಗಳ ಗುರಿ ಬೆನ್ನುಹತ್ತಿದ ಬಾಂಗ್ಲಾದೇಶ ಸಕಾರಾತ್ಮಕವಾಗಿಯೇ ಬ್ಯಾಟ್ ಬೀಸಿತು. ಆದರೆ ಆರಂಭಿಕ ಆಟಗಾರ ಮಹಮದ್ ಮಿತುನ್ ಕೇವಲ 1 ರನ್ ಗಳಿಸಿ ಔಟ್ ಆಗುವುದರೊಂದಿಗೆ ಆರಂಭಿಕ ಆಘಾತ ಎದುರಿಸುವಂತಾಯಿತು. ಮತ್ತೊಂದು ತುದಿಯಲ್ಲಿದ್ದ ತಮೀಮ್ ಇಕ್ಬಾಲ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಸೂಕ್ತ ಶಾಟ್ ಗಳ ಆಯ್ಕೆ ಮಾಡಿಕೊಂಡು ಬಾರಿಸುತ್ತಿದ್ದ ತಮೀಮ್ ಅಕ್ಷರಶಃ ಭಾರತೀಯ ಬೌಲರ್ ಗಳನ್ನು ದಂಡಿಸಿದರು. 35 ರನ್ ಗಳಿಸಿದ್ದ ತಮೀಮ್ ಜಡೇಜಾ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಶಬ್ಬೀರ್ ಮತ್ತು ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಮೊತ್ತವನ್ನು ಏರಿಸಿದರು. ಈ ಹಂತದಲ್ಲಿ ತಂಡದ ಮೊತ್ತ 69 ರನ್ ಆಗಿದ್ದಾಗ ರೈನಾ ಬೌಲಿಂಗ್ ನಲ್ಲಿ ಶಬ್ಬೀರ್ ಔಟ್ ಆದರು. ಬಳಿಕ ಕ್ರೀಸ್ ಗೆ ಆಗಮಿಸಿದ ಮುಶ್ರಫೆ ಮೋರ್ತಾಜಾ ಸಿಕ್ಸರ್ ಬಾರಿಸುವ ಮೂಲಕ ಭಾರತೀಯ ಪಾಳಯದಲ್ಲಿ ಆತಂಕಕ್ಕೆ ಕಾರಣರಾಗಿದ್ದರಾದರೂ ಜಡೇಜಾ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.




ನಂತರ ಭಾರತವನ್ನು ಕಾಡಿದ್ದು, ಸೌಮ್ಯ ಸರ್ಕಾರ್ ಮತ್ತು ಮಹಮದುಲ್ಲಾ. 21 ರನ್ ಗಳಿಸಿದ ಸೌಮ್ಯ ಸರ್ಕಾರ್ ಬಾಂಗ್ಲಾದೇಶವನ್ನು ಬಹುತೇಕ ಗೆಲುವಿನ ಸನಿಹಕ್ಕೆ ಕೊಂಡೊಯ್ದು ಔಟ್ ಆದರು. ಅಂತಿಮ ಓವರ್ ನಲ್ಲಿ ಬಾಂಗ್ಲಾಗೆ ಗೆಲ್ಲಲು 11 ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಹಾರ್ಧಿಕ ಪಾಂಡ್ಯಾ ಕೈಗೆ ಬಾಲ್ ನೀಡಿದ ಧೋನಿ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದರೆ ಧೋನಿ ನಂಬಿಕೆಯನ್ನು ಉಳಿಸಿಕೊಂಡ ಪಾಂಡ್ಯಾ ಭಾರತಕ್ಕೆ 1 ರನ್ ಗಳ ರೋಚಕ ಜಯ ತಂದಿತ್ತರು. ಮೊದಲ ಎಸೆತದಲ್ಲಿ 1 ರನ್ ನೀಡಿದ ಪಾಂಡ್ಯಾ, 2 ಮತ್ತು 3ನೇ ಎಸೆತದಲ್ಲಿ ಸತತ 2 ಬೌಂಡರಿಗಳನ್ನು ನೀಡಿ ಧೋನಿ ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡಿದ್ದರು. ಈ ಹಂತದಲ್ಲಿ ಪಂದ್ಯ ಭಾರತದ ಕೈ ಜಾರಿತ್ತು. ಆದರೆ ನಾಲ್ಕನೇ ಎಸೆತದಲ್ಲಿ ಮುಶ್ಫಿಕರ್ ರಹೀಮ್ ಅವರನ್ನು ಔಟ್ ಮಾಡುವ ಮೂಲಕ ಪಾಂಡ್ಯಾ ಮತ್ತೆ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಐದನೇ ಎಸೆತದಲ್ಲಿ ಕೂಡ ವಿಕೆಟ್ ಪಡೆಯುವ ಮೂಲಕ ಪಾಂಡ್ಯಾ ಪಂದ್ಯಕ್ಕೆ ರೋಚಕ ತಿರುವು ನೀಡಿದರು. 6ನೇ ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 2 ರನ್ ಗಳ ಅವಶ್ಯಕತೆ ಇದ್ದಾಗ, ಪಾಂಡ್ಯಾ ಎಸೆತವನ್ನು ಮಿಸ್ ಮಾಡಿಕೊಂಡ ಶುವಗಾತ ಒಂದು ರನ್ ಗಳಿಸುವ ಯತ್ನ ಮಾಡಿದರು. ಆದರೆ ವಿಕೆಟ್ ಹಿಂದಿದ್ದ ಧೋನಿ ಮುಸ್ತಫಿಜುರ್ ಅವರನ್ನು ರನ್ ಔಟ್ ಮಾಡುವ ಮೂಲಕ ಭಾರತಕ್ಕೆ 1 ರನ್ ನ ರೋಚಕ ಜಯ ತಂದಿತ್ತರು.
ಈ ಪಂದ್ಯದ ಗೆಲುವಿನ ಮೂಲಕ ಭಾರತ ತಂಡದ ಉಪಾಂತ್ಯದ ಆಸೆ ಜೀವಂತವಾಗಿದ್ದು, ಅಂಕ ಪಟ್ಟಿಯಲ್ಲಿ ಇದೀಗ ಭಾರತ ಎರಡನೇ ಸ್ಥಾನಕ್ಕೇರಿದೆ. 4 ಓವರ್ ಎಸೆದು 2 ಪ್ರಮುಖ ವಿಕೆಟ್ ಕಬಳಿಸಿದ ಆರ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.