ಕರ್ನಾಟಕ

ಪ್ಲಾಸ್ಟಿಕ್‌ ನಿಷೇಧ: ಸರ್ಕಾರದ ವಿವರಣೆ ಕೇಳಿದ ಕೋರ್ಟ್

Pinterest LinkedIn Tumblr

High-Court1ಬೆಂಗಳೂರು: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಹೈಕೋರ್ಟ್‌ ರಾಜ್ಯ ಸರ್ಕಾರದಿಂದ ವಿವರಣೆ ಬಯಸಿದೆ.
ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಇದೇ 11ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಮಂಗಳೂರಿನ ಕೆನರಾ ಪ್ಲಾಸ್ಟಿಕ್ಸ್‌ ಸೇರಿದಂತೆ 88 ಕಂಪೆನಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಭಾಗೀಯ ಪೀಠವು ಬುಧವಾರ ವಿಚಾರಣೆ ನಡೆಸಿತು.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ‘ನಿಗದಿತ 50 ಮೈಕ್ರಾನ್‌ಗಿಂತ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಯಾಕೆ ಅವಕಾಶ ನೀಡಬಾರದು’ ಎಂದು ಅಡ್ವೊಕೇಟ್‌ ಜನರಲ್‌ ಎಂ.ಆರ್‌. ನಾಯಕ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಯಕ್‌, ‘ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಆದಾಗ್ಯೂ ಔಷಧೀಯ ಬಳಕೆ ಹಾಗೂ ಹಾಲಿನ ಪ್ಯಾಕೆಟ್‌ನಂತಹ ವಸ್ತುಗಳಿಗೆ ಮಾತ್ರವೇ ಪ್ಲಾಸ್ಟಿಕ್‌ ಕವರ್‌ ಬಳಸಲಾಗುತ್ತಿದೆ’ ಎಂದು ವಿವರಿಸಿದರು.
‘ವಾಸ್ತವದಲ್ಲಿ ಈ ಅರ್ಜಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮುಂದೆ ಹೋಗಬೇಕು. ಒಂದು ವೇಳೆ ಎನ್‌ಜಿಟಿ ಆದೇಶ ಪ್ರಶ್ನಿಸಬೇಕಾಗಿ ಬಂದರೆ ಮಾತ್ರವೇ ಹೈಕೋರ್ಟ್‌ ಮೆಟ್ಟಿಲೇರಬಹುದು. ಹೀಗಾಗಿ ಅರ್ಜಿದಾರರು ನೇರವಾಗಿ ಇಲ್ಲಿಗೆ ಬರುವಂತಿಲ್ಲ’ ಎಂದು ಆಕ್ಷೇಪಿಸಿದರು.
ಇದನ್ನು ಅಲ್ಲಗಳೆದ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಅರ್ಜಿದಾರರು ನೇರವಾಗಿ ಹೈಕೋರ್ಟ್‌ ಮೆಟ್ಟಿಲೇರಲು ಅವಕಾಶವಿದೆ’ ಎಂದು ಸುಪ್ರೀಂ ಕೋರ್ಟ್‌ನ ಕೆಲ ತೀರ್ಪು ಉಲ್ಲೇಖಿಸಿದರು.
‘ನಾವು ಪ್ಲಾಸ್ಟಿಕ್‌ ಕಾರ್ಖಾನೆಗಳನ್ನು ತೆರೆಯಲು ಬ್ಯಾಂಕುಗಳು ಹಾಗೂ ಇತರೆ ಮೂಲಗಳಿಂದ ಸಾಲ ಪಡೆದಿದ್ದೇವೆ. ಸುಮಾರು 80 ಸಾವಿರ ಜನರು ಇವುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 1 ಲಕ್ಷ ಜನರು ಈ ಕಂಪೆನಿಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರ ಏಕಾಏಕಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದರಿಂದ ನಾವು ಬೀದಿಗೆ ಬೀಳುವಂತಾಗಿದೆ’ ಎಂಬುದು ಅರ್ಜಿದಾರರ ದೂರು.

Write A Comment