ಕರ್ನಾಟಕ

ಪಿಯು ಪ್ರಶ್ನೆಪತ್ರಿಕೆ ಬಯಲು, ಗಣಿತಕ್ಕೆ ವಿಷಯಕ್ಕೆ ಗ್ರೇಸ್ ಅಂಕ ನೀಡಲು ಪರಿಶೀಲನೆ: ಟಿ.ಬಿ.ಜಯಚಂದ್ರ

Pinterest LinkedIn Tumblr

chayaಬೆಂಗಳೂರು, ಮಾ.22- ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ ವೇಳೆಗೆ ವರದಿ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಗೆ ಭರವಸೆ ನೀಡಿದರು. ಗಣಿತ ಪ್ರಶ್ನೆ ಪತ್ರಿಕೆ ಕಠಿಣವಾಗಿದೆ ಮತ್ತು ಸೋರಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಳೆಯೇ ಅಧಿಕಾರಿಗಳ ಸಭೆ ಕರೆದು ಗ್ರೇಸ್ ಅಂಕ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಶೂನ್ಯವೇಳೆಯಲ್ಲಿ ಶಾಸಕರಾದ ಸುರೇಶ್‌ಕುಮಾರ್, ರಫೀಕ್ ಅಹಮ್ಮದ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ವಿದ್ಯಾರ್ಥಿಗಳ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಪ್ರಶ್ನೆಪತ್ರಿಕೆ ಬಯಲಾಗಿ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ತುರ್ತು ವರದಿ ನೀಡಲು ಈಗಾಗಲೇ ನಿರ್ದೇಶಿಸಲಾಗಿದ್ದು, ಸಂಜೆ ವೇಳೆಗೆ ವರದಿ ಸರ್ಕಾರಕ್ಕೆ ತಲುಪಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದಕ್ಕೂ ಮುನ್ನ ಶಾಸಕ ರಫೀಕ್ ಅಹಮ್ಮದ್ ವಿಷಯ ಪ್ರಸ್ತಾಪಿಸಿ, ಗಣಿತ ವಿಷಯದ ಪ್ರಶ್ನೆಗಳು ಪಠ್ಯೇತರಕ್ಕೆ ಸಂಬಂಧಿಸಿದಂತೆ ಬಂದಿವೆ. 100ಕ್ಕೆ 90-95ರಷ್ಟು ಅಂಕ ಗಳಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುತ್ತಾರೆ.ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಶಾಸಕ ಸುರೇಶ್‌ಕುಮಾರ್ ಮಾತನಾಡಿ, ರಾಸಾಯನಶಾಸ್ತ್ರದ ಪ್ರಶ್ನೆ ಪತ್ರಿಕೆ ಬಯಲಾಗಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿ ಆತಂಕಕ್ಕೊಳಗಾಗಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ಇದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.

Write A Comment