ಕರ್ನಾಟಕ

ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ : ಪಿಯು ಮಂಡಳಿಗೆ ಪೋಷಕರು, ವಿದ್ಯಾರ್ಥಿಗಳ ಮುತ್ತಿಗೆ, ಪ್ರತಿಭಟನೆ

Pinterest LinkedIn Tumblr

pucಬೆಂಗಳೂರು, ಮಾ.22- ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಪೋಷಕರು, ವಿದ್ಯಾರ್ಥಿಗಳ ದಂಡು ಇಂದು ಪಿಯು ಮಂಡಳಿಯತ್ತ ಧಾವಿಸಿ ನಿರ್ದೇಶಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಗಣಿತ ವಿಷಯದಲ್ಲೂ ಪಠ್ಯದಲ್ಲಿಲ್ಲದ ಪ್ರಶ್ನೆಗಳನ್ನು ಕೊಡಲಾಗಿತ್ತು. ಈಗ ರಾಸಾಯನಿಕ ವಿಜ್ಞಾನದ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ. ಇನ್ನುಳಿದಿರುವ ಪ್ರಶ್ನೆಪತ್ರಿಕೆಗಳೂ ಬಹಿರಂಗವಾಗಿವೆ ಎಂಬ ಸುದ್ದಿ ಕೇಳಿಬಂದಿದೆ ಎಂದು ನಿರ್ದೇಶಕರಿಗೆ ಮುತ್ತಿಗೆ ಹಾಕಿ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ನೂರಾರು ಪೋಷಕರು, ವಿದ್ಯಾರ್ಥಿಗಳು ಪಿಯು ಮಂಡಳಿ ಎದುರು ಆತಂಕದಿಂದ ಅಧಿಕಾರಿಗಳ ಬಳಿ ಮಾಹಿತಿ ಪಡೆಯಲು ಯತ್ನಿಸುತ್ತಿದ್ದರು. ಬಹಿರಂಗವಾಗಿರುವ ಪ್ರಶ್ನೆ ಪತ್ರಿಕೆ ಸಂಬಂಧ ಮಾ.28ರ ನಂತರ ಮರು ಪರೀಕ್ಷೆ ನಡೆಸಲಾಗುವುದು. ಸದ್ಯದಲ್ಲೇ ದಿನಾಂಕ ಪ್ರಕಟಿಸಲಾಗುವುದು. ರಾಸಾಯನಶಾಸ್ತ್ರ ಹೊರತುಪಡಿಸಿದರೆ ಬೇರಾವ ಪ್ರಶ್ನೆ ಪತ್ರಿಕೆಗಳೂ ಬಹಿರಂಗವಾಗಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ. ಪೋಷಕರು, ವಿದ್ಯಾರ್ಥಿಗಳು ಆತಂಕಕ್ಕೊಳಗಾಗಬೇಡಿ ಎಂದು ನಿರ್ದೇಶಕರು ಮನವಿ ಮಾಡಿದ್ದಾರೆ.

ಆದರೂ ವಿದ್ಯಾರ್ಥಿಗಳ ಪೋಷಕರ ಆತಂಕ ಮಾತ್ರ ದೂರವಾಗಿಲ್ಲ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಈಗ ಮತ್ತೆ ಪರೀಕ್ಷೆ ಬರೆಯಬೇಕಲ್ಲ ಎಂಬ ಚಿಂತೆ ಕಾಡುತ್ತಿದೆ. ಈಗಾಗಲೇ ಗಣಿತ ಪ್ರಶ್ನೆ ಪತ್ರಿಕೆ ಅತ್ಯಂತ ಕಠಿಣವಾಗಿದ್ದು, ಈಗ ಕೆಮಿಸ್ಟ್ರಿ ಮರು ಪರೀಕ್ಷೆ ನಡೆದರೆ ಮತ್ತೆಷ್ಟು ಕಷ್ಟವಾಗುತ್ತದೆಯೋ ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡತೊಡಗಿದೆ.ನಮ್ಮ ಮಕ್ಕಳ ಭವಿಷ್ಯ ಹಾಳಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಆರೋಪವಿದೆ. ಪಿಯು ಮಂಡಳಿ ಅಧಿಕಾರಿಗಳು ಶಾಮೀಲಾಗದಿದ್ದರೆ ಬಹಿರಂಗವಾಗಲು ಸಾಧ್ಯವೇ ಇಲ್ಲ ಎಂದು ಪೋಷಕರು ಹರಿಹಾಯ್ದಿದ್ದಾರೆ.

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಓದಿಕೊಳ್ಳಬೇಕಾಗಿತ್ತು. ಆದರೆ, ತಮ್ಮ ಪೋಷಕರೊಂದಿಗೆ ಆತಂಕದಿಂದ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ ಎಂದು ಹಲವು ಪೋಷಕರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂತು. ಪ್ರತಿ ಬಾರಿ ಪಿಯು ಮಂಡಳಿಯಲ್ಲಿ ಒಂದಲ್ಲ ಒಂದು ಗೊಂದಲ ಇದ್ದೇ ಇರುತ್ತದೆ. ಯಾವಾಗ ಸರಿಯಾಗುವುದೋ, ನಮ್ಮ ಮಕ್ಕಳ ಭವಿಷ್ಯದ ಗತಿಯೇನು ಎಂದು ಹಲವು ಪೋಷಕರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

Write A Comment