ಕರ್ನಾಟಕ

ಕರ್ನಾಟಕದಲ್ಲಿ ತಾಲಿಬಾನ್ ವ್ಯವಸ್ಥೆ ಸೃಷ್ಟಿಯಾಗಿದೆ : ಕೆ.ಎಸ್.ಈಶ್ವರಪ್ಪ

Pinterest LinkedIn Tumblr

eshಬೆಂಗಳೂರು, ಮಾ.21- ರಾಜ್ಯದಲ್ಲಿ ಕಾನೂನು ಬದ್ಧವಾಗಿ ಹೋರಾಟ ಮಾಡುವಂತಹ ಹಿಂದು ಯುವಕರಿಗೆ ರಕ್ಷಣೆ ಇಲ್ಲ ದಂತಾಗಿದ್ದು, ಕರ್ನಾಟಕದಲ್ಲಿ ತಾಲಿಬಾನ್‌ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಮೈಸೂರಿನಲ್ಲಿ ಇತ್ತೀಚೆಗೆ ಹತ್ಯೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮ 59ರ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗೆ ಮನವಿ ಮಾಡಿದರು. ವಿಷಯ ಪ್ರಸ್ತಾಪಿಸಲು ಈಶ್ವರಪ್ಪನವರಿಗೆ ಸಭಾಪತಿ ಸೂಚನೆ ಕೊಟ್ಟಾಗ ಮೈಸೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಎಂಬುವರನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ.

ರಾಜ್ಯದಲ್ಲಿ ಕಾನೂನುಬದ್ಧವಾಗಿ ಹೋರಾಟ ಮಾಡುವವರಿಗೆ ಸರ್ಕಾರ ರಕ್ಷಣೆ ನೀಡದೇ ಕೊಲೆ ಪಾತಕಿಗೆ ಬೆಂಬಲ ನೀಡುತ್ತಿವೆ. ನಮ್ಮ ರಾಜ್ಯ ತಾಲಿಬಾನ್ ನಂತೆ ಮುನ್ನಡೆಯುತ್ತಿದೆ ಎಂದು ಟೀಕಿಸಿದರು.

ಕಳೆದ 20 ವರ್ಷಗಳಿಂದ ಮೈಸೂರಿನಲ್ಲಿ ರಾಜು ಕಾನೂನು ಬದ್ಧವಾಗಿ ಹೋರಾಟ ನಡೆಸಿ ಪಾಲಿಕೆಯಿಂದ ಲೈಸನ್ಸ್ ಪಡೆದು ತಮ್ಮ ಮನೆ ಬೀದಿಯಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಿದರು. ಇದನ್ನು ಸಹಿಸದ ಅನ್ಯ ಕೋಮಿನವರು ಲೈಸನ್ಸ್ ಪಡೆಯದೇ, ಪಾಲಿಕೆಯಿಂದ ಅನುಮತಿ ಪಡೆಯದೇ ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಕೊಲೆಯಾಗಿದೆ ಎಂದು ಆಪಾದಿಸಿದರು. ಮೈಸೂರಿನಲ್ಲಿ ರಾಜು, ಉಡುಪಿಯಲ್ಲಿ ಪ್ರಕಾಶ್ ಪೂಜಾರಿ, ಶಿವಮೊಗ್ಗದಲ್ಲಿ ವಿಶ್ವನಾಥ್, ಮಡಿಕೇರಿಯಲ್ಲಿ ಕೊಟ್ಟಪ್ಪ ಅವರ ಕೊಲೆಯಾಗಿದೆ. ರಾಜ್ಯದಲ್ಲಿ ಕೊಲೆಗಡುಕರಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಶಿವಮೊಗ್ಗದಲ್ಲಿಯೂ ಕೂಡ ಹೊರಗಿನಿಂದ ಬಂದವರು ಪಾಕಿಸ್ತಾನ ಪರ ಜಿಂದಾಬಾದ್ ಎಂದು ಹೇಳಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಪಾಪುಲರ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಇದನ್ನು ಏಕೆ ನಿಷೇಧ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮೈಸೂರಿನ ರಾಜು ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನ ಸೇರಿದ್ದರು. ಅಂತ್ಯ ಸಂಸ್ಕಾರದ ಬಳಿಕ ಕೆಲ ಸಂಘಟನೆಯ ಯುವಕರು ವಾಹನಗಳಲ್ಲಿ ಮಚ್ಚು, ಲಾಂಗ್ ಹಿಡಿದುಕೊಂಡು ಪೊಲೀಸರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋ ಕ್ಲಿಪ್ಪಿಂಗ್ಸ್ ಕೂಡ ಇದೆ. ಆದರೆ, ಇದುವರೆಗೂ ಯಾವುದೇ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ ಎಂದು ಹರಿಹಾಯ್ದರು.

ಗೃಹ ಸಚಿವರು ಮೈಸೂರಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ. 5 ಲಕ್ಷ ರೂ. ಪರಿಹಾರ ಕೂಡ ನೀಡಿದ್ದಾರೆ. ಕೊಲೆ ಮಾಡಿದವರ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ. ಆದರೆ, ಹಂತಕರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ವಿ.ಎಸ್.ಉಗ್ರಪ್ಪ ಕ್ರಿಯೋಲೋಪವೆತ್ತಿ ನಿಯಮ 59ರ ಅಡಿ ಚರ್ಚಿಸುವಾಗ ಸಾರ್ವಜನಿಕರ ಮಹತ್ವದ ವಿಷಯವಾಗಿರಬೇಕೆಂದು ಕೆಲವು ನಿಯಮ ಉಲ್ಲೇಖಮಾಡಿದರು. ದೆಹಲಿಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಪಾಕಿಸ್ತಾನಪರ ಜಿಂದಾಬಾದ್ ಎಂದು ಕೇಂದ್ರ ಸಚಿವರ ಸಮ್ಮುಖದಲ್ಲಿ ಹೇಳಿದ್ದಾರೆಂದು ಆರೋಪಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲ ಉಂಟಾಯಿತು. ಉಗ್ರಪ್ಪ ಈ ದೇಶ ಕಂಡ ಮಹಾನ್ ಕಾನೂನು ತಜ್ಞರು ಇಂತಹ ಕಾನೂನು ತಜ್ಞರನ್ನು ಸಿಎಂ ಇಟ್ಟುಕೊಂಡಿರುವುದರಿಂದಲೇ ಸಿಎಂ ಹಾಳಾಗಿಹೋಗಿದ್ದಾರೆಂದು ಈಶ್ವರಪ್ಪ ತಿರುಗೇಟು ಕೊಟ್ಟರು.ಈ ಹಂತದಲ್ಲಿ ಸಭಾನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಈ ವಿಷಯವನ್ನು ನಿಯಮ 59ರಡಿ ಚರ್ಚೆಗೆ ಕೈಗೆತ್ತಿಕೊಳ್ಳಬಾರದು. ಸಭಾಪತಿಗಳ ಸಾಧ್ಯವಾದರೆ 68ರಡಿ ನಿಯಮ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

Write A Comment