ಬೆಂಗಳೂರು: ರಾಜಕೀಯದಲ್ಲಿರುವ ಮಹಿಳೆ ಬೆಳೆಯುವುದು ತುಂಬಾ ಕಷ್ಟ. ಯಾಕೆಂದರೆ ಅಲ್ಲಿ ಮಹಿಳೆಯರನ್ನು ತುಳಿಯುವುದೇ ಹೆಚ್ಚು ಎಂದು ನಟಿ, ಮಾಜಿ ಸಂಸದೆ ರಮ್ಯಾ ಅಭಿಪ್ರಾಯಿಸಿದ್ದಾರೆ.
ಅವರು ಸೋಮವಾರ ನಗರದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸಮ್ಮೇಳನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಬೆಳೆಯುವುದು ತುಂಬಾ ಕಷ್ಟ. ಎಂಎಲ್‌ಎ, ಎಂಎಲ್‌ಸಿ, ಎಂಪಿ ಯಾವ ಸ್ಥಾನ ನನಗೆ ನೀಡಿದರೂ ನಿರ್ವಹಿಸುತ್ತೇನೆ ಎಂದು ಸ್ಯಾಂಡಲ್‌ವುಡ್ ನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಚಿತ್ರನಟಿಯಾಗಿರುವುದರಿಂದ ನನಗೆ ಸಂಸದೆಯಾಗಿ ಆಯ್ಕೆಯಾಗುವುದು ಕಷ್ಟವಾಗಲಿಲ್ಲ. ಆದರೆ, ರಾಜಕೀಯವಾಗಿ ಬೆಳೆಯಲು ತುಂಬಾ ಕಷ್ಟವಾಗುತ್ತಿದೆ. ಮಹಿಳೆ ಎನ್ನುವ ಕಾರಣಕ್ಕೆ ಎಲ್ಲರು ತುಳಿಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ನೀಡುವ ಸ್ಥಾನದ ಬಗ್ಗೆ ನಾಯಕರು ನಿರ್ಧರಿಸುತ್ತಾರೆ. ನಮ್ಮ ನಾಯಕರೇ ನಿರ್ಧರಿಸಿ ಸೂಕ್ತ ಸ್ಥಾನಮಾನ ನೀಡುತ್ತಾರೆ. ಆದ್ದರಿಂದ, ಯಾವುದೇ ಸ್ಥಾನಮಾನ ನೀಡುವಂತೆ ಪಕ್ಷವನ್ನು ಕೋರಿಲ್ಲ ಎಂದು ಮಾಜಿ ಸಂಸದೆ ರಮ್ಯಾ ತಿಳಿಸಿದ್ದಾರೆ.