ಕರ್ನಾಟಕ

ಬಾಂಧವ್ಯ ಬೆಸೆಯುವ ಜಾತ್ರೆಗಳು

Pinterest LinkedIn Tumblr

jaatreಬೆಂಗಳೂರು, ಮಾ. ೧೯- ಜಾತ್ರಾ ಮಹೋತ್ಸವಗಳು ಜನರಲ್ಲಿ ಸಂಭ್ರಮವನ್ನು ಹೆಚ್ಚಿಸಿ ಪ್ರೀತಿ, ವಿಶ್ವಾಸ, ಬಾಂಧವ್ಯಗಳನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಚಿತ್ರದುರ್ಗ ಶ್ರೀ ಸಿದ್ದರಾಮೇಶ್ವರ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ತಿಳಿಸಿದರು.
ಅರೇಹಳ್ಳಿಯ ಶ್ರೀ ತಪೋವನ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀ ಕಬ್ಬಾಳಮ್ಮ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ ನಮ್ಮ ಪರಂಪರೆಯ ಇತಿಹಾಸದಲ್ಲಿ ಜಾತ್ರಾ ಮಹೋತ್ಸವಗಳು ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಬಿ.ಬಿ.ಎಂ.ಪಿ ಸದಸ್ಯ ಎಂ.ಹನುಮಂತಯ್ಯ ಮಾತನಾಡಿ ಬಾಲ್ಯದಲ್ಲಿ ಇಂತಹ ಹಬ್ಬ ಹರಿದಿನಗಳು ನಮಗೆ ಮನೋಲ್ಲಾಸವನ್ನು ನೀಡಿ ನವೋಲ್ಲಾಸವನ್ನು ತುಂಬುತ್ತಿದ್ದವು. ಇಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಯುವಂತೆ ಪ್ರೇರೇಪಿಸುವ ಅಗತ್ಯವಿದ್ದು, ಯುವ ಪೀಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಪರಿಸರ ನಿರ್ಮಾಣದ ಅಗತ್ಯತೆ ಇದೆ ಎಂದು ತಿಳಿಸಿದರು.
ಮಹೋತ್ಸವದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ರಮೇಶ್‌ರಾಜು, ದೊಡ್ಡೇರಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಿ ಚಂದ್ರಪ್ಪ, ಸಮಾಜ ಸೇವಕ ಎಂ.ವಿ.ಪ್ರಸಾದ್‌ಬಾಬು ಶ್ರೀ ತಪೋವನ ಕ್ಷೇತ್ರ ದೇವಸ್ಥಾನಗಳ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷ ವಿ.ಆಂಜನಪ್ಪ, ಖಜಾಂಚಿ ಎ.ಸುರೇಶ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬೆಳಿಗ್ಗೆ ಪಂಚಾಮೃತಾಭಿಷೇಕ, ರಜತ ಕವಚಧಾರಣೆ, ಮಹಾಗಣಪತಿ ಪೂರ್ವಕ ಚಂಡಿಕಾ ಹೋಮ, ಪೂರ್ಣಾಹುತಿ ರಥಕಳಶ, ರಥ ಸಂಪ್ರೋಕ್ಷಣೆ, ರಥ ಬಲಿ ಹರಣ, ಕಾರ್ಯಕ್ರಮ ಹಮ್ಮಿಕೊಂಡು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾನಪದ ಕಲಾಪ್ರಕಾರಗಳಾದ ಡೊಳ್ಳು, ವೀರಗಾಸೆ, ಪೂಜಾಕುಣಿತಗಳ ಪ್ರದರ್ಶನಗಳೊಂದಿಗೆ ಉತ್ಸಾಹದಿಂದ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಯಲ್ಲಿ ಮಿಂದೆದ್ದರು.
ಚಿತ್ರ ೧ : ಅರೇಹಳ್ಳಿಯ ಎ.ಜಿ.ಎಸ್ ಬಡಾವಣೆಯಲ್ಲಿ ಶ್ರೀ ತಪೋವನ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀ ಕಬ್ಬಾಳಮ್ಮ ಬ್ರಹ್ಮರಥೋತ್ಸವಕ್ಕೆ ಚಿತ್ರದುರ್ಗ ಶ್ರೀ ಸಿದ್ದರಾಮೇಶ್ವರ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ, ಬಿ.ಬಿ.ಎಂ.ಪಿ ಸದಸ್ಯ ಎಂ.ಹನುಮಂತಯ್ಯ, ಮಾಜಿ ಸದಸ್ಯ ರಮೇಶ್‌ರಾಜು, ಶ್ರೀ ತಪೋವನ ಕ್ಷೇತ್ರ ದೇವಸ್ಥಾನಗಳ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷ ವಿ.ಆಂಜನಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Write A Comment